SUDDIKSHANA KANNADA NEWS/ DAVANAGERE/ DATE:04-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದರೆ ಪ್ರಾಮಾಣಿಕವಾಗಿ ಗೆಲುವಿಗೆ ಶ್ರಮಿಸುತ್ತೇವೆ. ಒಂದು ವೇಳೆ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡದಿದ್ದರೆ ನನಗೆ ನೀಡಿ ಎಂದು ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕೆ. ಬಿ. ಕೊಟ್ರೇಶ್ ಅವರು ಮನವಿ ಮಾಡಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂಬ ಕೂಗು ಮತ್ತು ಆಗ್ರಹ ಕೇಳಿ ಬಂದಿದೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ವರಿಷ್ಠರು ಟಿಕೆಟ್ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಬರಬೇಕು. ಮತ್ತೆ ಪ್ರಧಾನಿಯಾಗಿ ಮೋದಿ ಅವರು ಅಧಿಕಾರ ಸ್ವೀಕರಿಸಬೇಕು. 400 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿ ಟಾರ್ಗೆಟ್ ಇಟ್ಟುಕೊಂಡಿದೆ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಗೆಲ್ಲಲು ತಂತ್ರಗಾರಿಕೆ ನಡೆಸಿದೆ. ಮೋದಿ ಅವರ ಕೈಬಲಪಡಿಸಲು ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸಿದ್ದೇಶ್ವರ ಅವರು ತುಂಬಾ ಹಿರಿಯರು. ಅವರ ತಂದೆ ಮಲ್ಲಿಕಾರ್ಜುನಪ್ಪ ಅವರೂ ಸಹ ಒಳ್ಳೆಯ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಿದ್ದೇಶಣ್ಣರಿಗೆ ಟಿಕೆಟ್ ನೀಡಿದರೆ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಒಂದು ವೇಳೆ ಹೊಸಮುಖಗಳಿಗೆ ಟಿಕೆಟ್ ನೀಡುವ ತೀರ್ಮಾನ ಆದರೆ ನನಗೆ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿರುವ ಅವರು, ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ವೀಕ್ಷಕರು ಈಗಾಗಲೇ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರೂ ನಾಲ್ಕು ಮಂದಿ ಆಕಾಂಕ್ಷಿಗಳಿದ್ದೇವೆ ಎಂದಿದ್ದಾರೆ. ಹೊಸಬರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ, ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯು ಬಿಜೆಪಿಯ ಭದ್ರಕೋಟೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯೇ ಜಯಭೇರಿ ಬಾರಿಸುವುದು ಖಚಿತ. ಕೇಂದ್ರ ಸರ್ಕಾರದ ಸಾಧನೆಗಳು, ಪ್ರಧಾನಿ ಮೋದಿ ಅವರ ಜನಪ್ರಿಯತೆ, ರಾಮಮಂದಿರ ಉದ್ಘಾಟನೆ ಸೇರಿದಂತೆ ದೇಶದಲ್ಲಿ ಅಭಿವೃದ್ಧಿ ಸಮರೋಪಾದಿಯಲ್ಲಿ ಆಗಿದೆ. ತಾನು ಸಂಸದನಾಗಿ ಆಯ್ಕೆಯಾದರೆ ನನ್ನದೇ ಆದ ಯೋಜನೆಗಳಿವೆ. ಅವುಗಳನ್ನು ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಪಕ್ಷದ ವಿವಿಧ ಕಾರ್ಯಕ್ರಮಗಳು, ಆರ್ ಎಸ್ ಎಸ್ ನ ಸಭೆ, ಸಮಾರಂಭಗಳು, ಸಮಾಜಸೇವೆ, ಪಕ್ಷ ಸಂಘಟನೆ, ರೈತ ಹೋರಾಟ ಸೇರಿದಂತೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಕೆ. ಬಿ. ಕೊಟ್ರೇಶ್ ಅವರು ಹೇಳಿದ್ದಾರೆ.