SUDDIKSHANA KANNADA NEWS/ DAVANAGERE/ DATE:01-03-2024
ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ ಅಧ್ಯಕ್ಷ ಸಿ. ಲಕ್ಷ್ಮಣ್, ಗೌರವಾಧ್ಯಕ್ಷ ರಾಘವೇಂದ್ರ ನಾಯರಿ, ಐರಣಿ ಚಂದ್ರು ಹಾಗೂ ಯುಕ್ಟಾದ ಪುರಂದರ ಲೋಕಿಕೆರೆ ಅವರು ಹೋರಾಟದ ಹಾಡುಗಳನ್ನು ಹಾಡಿ ಗಮನ ಸೆಳೆದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ದೇಶದಾದ್ಯಂತ ಕರೆ ಮೇರೆಗೆ ಪ್ರತಿಭಟನೆ ನಡೆಸಿ ಕಾರ್ಮಿಕರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಅವರಗೆರೆ ಉಮೇಶ್ ಮಾತನಾಡಿ ರಾಜ್ಯಾದ್ಯಂತ ಹಲವಾರು ನಕಲಿ ಕಟ್ಟಡ ಕಾರ್ಮಿಕರ ಕಾಡುಗಳು ಚಾಲ್ತಿಯಲ್ಲಿವೆ. ಇವುಗಳನ್ನು ಕೂಡಲೇ ರದ್ದುಪಡಿಸಬೇಕೆಂದು ಕಳೆದ ಆರು ತಿಂಗಳಲ್ಲಿ ಒತ್ತಾಯ ಮಾಡುತ್ತಿದ್ದೆೇವೆ. ಆದರೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕ ನೀಡುತ್ತಿರುವ ಲ್ಯಾಪ್ ಟಾಪ್ ಗಳು ಕಳಪೆಯಾಗಿವೆ. ಒಂದು ಲ್ಯಾಪ್ ಟಾಪ್ ಬೆಲೆ ಮಾರುಕಟ್ಟೆಯಲ್ಲಿ 32,000 ಇದ್ದು, ಅದನ್ನ 72,000 ರೂ ಗಳಿಗೆ ಖರೀದಿ ಮಾಡಲಾಗಿದೆ ಎಂದು ತೋರಿಸಿದ್ದಾರೆ. ಇದು ಅಕ್ಷಮ್ಯ, ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಆಗಿರುವ ಲೋಪದೋಷಗಳನ್ನ ಸರಿಪಡಿಸಿ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಸೂಕ್ತ ರೀತಿಯಲ್ಲಿ ಗುಣಮಟ್ಟದ ಪರಿಕರಗಳನ್ನು ನೀಡಬೇಕು. ಅವರಿಗೆ ಜೀವನ ಭದ್ರತೆ ಒದಗಿಸಬೇಕು. ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನಾಹುತ ಆದಲ್ಲಿ 5 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದೂ ಸೇರಿದಂದೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಮೆರವಣಿಗೆಯಲ್ಲಿ ನೂರಾರು ಕಟ್ಟಡ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಹರಿಹರ, ಜಗಳೂರು ತಾಲೂಕಿನ ಪದಾಧಿಕಾರಿಗಳು, ಮುಖಂಡರು, ಕಾರ್ಮಿಕರು ಪಾಲ್ಗೊಂಡಿದ್ದರು.