SUDDIKSHANA KANNADA NEWS/ DAVANAGERE/ DATE:20-02-2024
ದಾವಣಗೆರೆ: ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದು, ನೀರಿಗೆ ಹಾಹಾಕಾರ ಬಂದಿದೆ. ಕೃಷಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ತಾತ್ವರ ಎದುರಾಗಿದೆ. ಏಷ್ಯಾಖಂಡದ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಸೂಳೆಕೆರೆ ಬಿಸಿಲಿನ ಬೇಗೆ ಹೆಚ್ಚಳವಾಗುತ್ತಿದ್ದಂತೆ ಸೂಳೆಕೆರೆ ಒಡಲು ಬರಿದಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರಿನ ಸೆಲೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಚಿತ್ರದುರ್ಗಕ್ಕೆ ಸೂಳೆಕೆರೆ ಅಥವಾ ಶಾಂತಿಸಾಗರದ ನೀರೇ ಆಧಾರ. ಆದ್ರೆ, ಬರ ಭೀಕರತೆ ಎಷ್ಟೊಂದು ಸಮಸ್ಯೆ ತಂದಿಟ್ಟಿದೆ ಎಂದರೆ ಬೆಳೆದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪಂಪ್ ಸೆಟ್ ಗಳು ತಂದಿಟ್ಟ ಸಂಕಷ್ಟ:
ಈ ವರ್ಷವಂತೂ ಭೀಕರ ಬರಗಾಲದ ಛಾಯೆ ಮೂಡಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಿಸಿಲನ ಧಗೆಗೆ ನೀರು ಬತ್ತುತ್ತಿದೆ. ಕೆರಗಳು ಸಂಪೂರ್ಣವಾಗಿ ಬರಿದಾಗುತ್ತಿವೆ. ಜಿಲ್ಲೆಯಲ್ಲಿನ ನೂರು ಕೆರೆಗಳು
ಬತ್ತಿ ಹೋಗಿವೆ ಎಂದರೆ ಬರಗಾದ ಭೀಕರತೆಗೆ ಸಾಕ್ಷಿಯಾಗಿದೆ.
ಶಾಂತಿಸಾಗರ ಅಥವಾ ಸೂಳೆಕೆರೆ ನೀರನ್ನೇ ಹೆಚ್ಚಾಗಿ ಚನ್ನಗಿರಿ ತಾಲೂಕಿನ ರೈತರು ಹಾಗೂ ಜನರು ಅವಲಂಬಿಸಿದ್ದಾರೆ. ಈ ಕೆರೆಯು ಬತ್ತಿ ಹೋಯ್ತೆಂದರೆ ಜನರಿಗೆ ಕುಡಿಯು ನೀರು ಸಿಗುವುದು ಕಷ್ಟವಾಗುತ್ತದೆ. ಕೃಷಿಗಾಗುವ ಸಮಸ್ಯೆ ಹೇಳತೀರದ್ದು.
ಹೆಚ್ಚಾಗಿ ಅಡಿಕೆ ಬೆಳೆಯುವ ಅಡಿಕೆ ಬೆಳೆಗಾರರ ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಈ ಬಾರಿ ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸಪಡುವಂತಾಗಿದೆ.
ಒಂದೆಡೆ ಭದ್ರಾ ಡ್ಯಾಂ ನೀರು ಸಹ ಸಮರ್ಪಕವಾಗಿ ಸಿಗುತ್ತಿಲ್ಲ. ಸೂಳೆಕೆರೆಗೆ ಭದ್ರಾ ನಾಲೆಯ ಮೂಲಕ ಬರುವ ನೀರು ಬರುವುದಿಲ್ಲ.ರೈತರಿಗೆ ಸಮೃದ್ಧಿಯಾಗಿ ನೀರು ಸಿಕ್ಕ ಬಳಿಕವಷ್ಟೇ ಸೂಳೆಕೆರೆ ನೀರು ಹರಿಸಲಾಗುತ್ತದೆ. ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಾರಣಕ್ಕೆ ಇದು ಸಹ ಅಸಾಧ್ಯ. ಭದ್ರಾ ಡ್ಯಾಂ ನೀರು ಸೂಳೆಕೆರೆಗೆ ಈ ಬೇಸಿಗೆಯಲ್ಲಿ ಬರುವುದಿಲ್ಲ. ಅವಧಿಗೆ ಮುನ್ನ ಮಳೆಯಾದರೆ ರೈತರ ಬದುಕು ಸ್ವಲ್ಪ ಮಟ್ಟಿಗೆ ಚೇತರಿಕೆಯಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ತೀವ್ರತೆ ಊಹಿಸಲು ಆಗದು.
ಸಂಪೂರ್ಣ ಬರಿದಾಗುವ ಆತಂಕ:
ಸೂಳೆಕೆರೆ ನೀರು ಕುಡಿಯಲೂ ಬೇಕು, ತೋಟ ಉಳಿಸಿಕೊಳ್ಳಲೂ ಬೇಕು ಎಂಬುದು ರೈತರ, ಜನರ ಅಭಿಮತವಾಗಿದೆ. ಈ ಹಪಾಹಪಿತನದಿಂದ ಶಾಂತಿಸಾಗರ ಕೆರೆ ಸಂಪೂರ್ಣವಾಗಿ ಖಾಲಿಯಾಗುವ ಆತಂಕವೂ ಎದುರಾಗಿದೆ. ತೋಟಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸೂಳೆಕೆರೆ ಹಿನ್ನೀರು ಭಾಗದಲ್ಲಿ ನೂರಾರು ಪಂಪ್ ಸೆಟ್ ಗಳನ್ನು ಅಳವಡಿಸಲಾಗಿದೆ. ನಿರಂತರ ತೋಟಗಳಿಗೆ ನೀರು ಹಾಯಿಸಲಾಗುತ್ತಿದೆ. ಕೊಳವೆ ಬಾವಿ ಬರಿದಾಗಿ ರೈತರಿಗೆ ಈ ನೀರಿನ ಅವಲಂಬನೆ ಅನಿವಾರ್ಯ. ತೋಟ ನೀರಿಲ್ಲದೇ ಸೊರಗಿದರೆ ಬದುಕು ಮೂರಾಬಟ್ಟೆ ಎಂಬ ಆತಂಕದಲ್ಲಿ ಮುಂದೆ ನೋಡೋಣ. ಈಗ ತೋಟ ಉಳಿಸಿಕೊಳ್ಳೋಣ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಇದು ಸಮಸ್ಯೆ ಮತ್ತಷ್ಟು ಜಟಿಲವಾಗುವಂತೆ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಈ ಬಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಅಂತರ್ಜಲ ಮಟ್ಟವೂ ದಿನ ಕಳೆದಂತೆ ಕುಸಿಯುತ್ತಿದೆ. ಕೆರೆಯ ಹಿನ್ನೀರಿಗೆ ಮೋಟಾರ್ ಅಳವಡಿಸಿಕೊಂಡು ತೋಟ ರಕ್ಷಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಚನ್ನಗಿರಿ ತಾಲೂಕಿನ ದೇವರಹಳ್ಳಿ, ಹಿರೇಉಡ, ಚಿಕ್ಕದೇವರಹಳ್ಳಿ, ಕೊಂಡದಹಳ್ಳಿ, ಚಿನ್ನಾಪುರ, ಕಗತೂರು, ಬುಳುಸಾಗರ, ಆಕಳಕಟ್ಟೆ, ಗುಳ್ಳಳ್ಳಿ ಸೇರಿದಂತೆ ಸುಮಾರು 200 ಪಂಪ್ ಸೆಟ್ ಗಳು ಕೆರೆಯ ಹಿನ್ನೀರ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ಭದ್ರಾ ನಾಲೆಯ ನೀರನ್ನು ಶಾಂತಿಸಾಗರಕ್ಕೆ ಕೂಡಲೇ ಹರಿಸಬೇಕು. ಆಗ ರೈತರು ಉಸಿರಾಡಬಹುದು, ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಬಹುದು ಎನ್ನುತ್ತಾರೆ ಚನ್ನಗಿರಿ ಭಾಗದ ರೈತರು.
ನೀರು ಕೇವಲ 30 ದಿನಗಳಿಗಷ್ಟೇ
ಕೇವಲ ಚನ್ನಗಿರಿ ಮಾತ್ರವಲ್ಲ, ಚಿತ್ರದುರ್ಗ ಜಿಲ್ಲೆಯ ಜನರ ಪಾಡಂತೂ ಹೇಳತೀರದ್ದಾಗುತ್ತದೆ. ಯಾಕೆಂದರೆ ಚಿತ್ರದುರ್ಗ, ಹೊಳಲ್ಕೆರೆ ಭಾಗದ ಜನರಿಗೂ ಇದೇ ಜೀವ ಸೆಲೆ. ಸದ್ಯ ಸಂಗ್ರಹದಲ್ಲಿರುವ ನೀರು ಕೇವಲ 30 ದಿನಗಳಿಗಷ್ಟೇ ಆಗಲಿದೆ. ಒಂದು ತಿಂಗಳ ಬಳಿಕ ಏನು ಮಾಡಬೇಕು ಎಂಬ ಚಿಂತೆಯೂ ಕಾಡಲಾರಂಭಿಸಿದೆ. ಜೂನ್ ವರೆಗೆ ಕುಡಿಯುವ ನೀರು ಪೂರೈಸಲು 0.54 ಟಿಎಂಸಿ ನೀರು ಅವಶ್ಯಕವಾಗಿ ಬೇಕು. ಭದ್ರಾ ನಾಲೆಯಿಂದ ನೀರು ಹರಿಸಿದರೆ ಮಾತ್ರ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ. ಇಲ್ಲದಿದ್ದರೆ ಸಂಕಷ್ಟ ದಿನಗಳು ಎದುರಾಗುವುದು ಖಚಿತ.
ಶಾಂತಿಸಾಗರದಿಂದ ಬೇರೆ ಜಿಲ್ಲೆಗಳಿಗೆ ಹೋಗುವ ನೀರಿನ ಪ್ರಮಾಣ ನಿಗದಿ ಮಾಡಬೇಕು. ಎಷ್ಟು ಹೋಗಬೇಕು ಎಂಬ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸ್ಥಳೀಯವಾಗಿ ಸಮಸ್ಯೆಗಳು ಸಾಕಷ್ಟಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ಮೊದಲು ಸ್ಥಳೀಯವಾಗಿ ಆದ್ಯತೆ ನೀಡಬೇಕು. ಆಮೇಲೆ ಬೇರೆ ಜಿಲ್ಲೆಯವರಿಗೆ ನೀಡಲಿ. ಬರಗಾಲದಲ್ಲಿ ನೀರು ಹರಿಸಲು ತುಂಬಾನೇ ಲೆಕ್ಕಾಚಾರ ಹಾಕಲಾಗುತ್ತಿದೆ. ಪಂಪ್ ಸೆಟ್ ಗಳ ಅಕ್ರಮ, ಸಕ್ರಮ ಈಗ ಚರ್ಚಿಸಲಾಗುತ್ತಿದೆ. ಈ ಹಿಂದೆಯೇ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್ ಸೆಟ್ ತೆರವುಗೊಳಿಸಿದ್ದರೆ ಈಗ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಮಸ್ಯೆ ಬಂದಾಗ ವೆಂಕಟರಮಣ ಎಂದು ಕೊರಗುವ ಬದಲು ಮೊದಲೇ ಎಚ್ಚುತ್ತುಕೊಂಡಿದ್ದರೆ ಇಂದಿನ ಪರಿಸ್ಥಿತಿ ಸ್ವಲ್ಪವಾದರೂ ಬದಲಾಗಿರುತಿತ್ತು ಎನ್ನುತ್ತಾರೆ ರೈತರು.