SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ಸಮರ್ಥ ಜನಪರ ಆಡಳಿತ ನೀಡಲು ವಿಫಲವಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆಂಬ ಆತಂಕದಲ್ಲಿ ಪ್ರಾದೇಶಿಕ ಭಾವನೆಯನ್ನು ಕೆರಳಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ ಪಕ್ಷದ ಧೋರಣೆ ಮತ್ತು ನೀತಿಯನ್ನು ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸಿದೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ. ಗೆಲುವು ಸಾಧಿಸಬೇಕೆಂದು ವಿವೇಚನೆ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನ ಘೋಷಿಸಿ ಅದರ ಅನುಷ್ಠಾನಕ್ಕೆ ತಿಣಕಾಡುತ್ತಿರುವ ರಾಜ್ಯ ಸರ್ಕಾರ ಇಂದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ. ಯಾವ ಅಭಿವೃದ್ಧಿ ಕಾರ್ಯಗಳಿಗು ಹಣವಿಲ್ಲದೆ ಜನರಿಂದ ತೀವ್ರ ವಿರೋಧವನ್ನು ಎದುರಿಸುತ್ತಿದೆ. ಯಾವುದಕ್ಕಾದರೂ ಈ ರೀತಿಯ ಸರ್ಕಾರವನ್ನು ನಾವು ಆರಿಸಿದೆವು ಎಂದು ಜನ ಮಾತನಾಡತೊಡಗಿದ್ದಾರೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಆಧಾರರಹಿತವಾದ ಆರೋಪವನ್ನು ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಮುಖಂಡ ಡಿ. ಎಸ್.
ಶಿವಶಂಕರ್ ಆರೋಪಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಶಿಸ್ತನ್ನು ತಂದು ಸಂಕಷ್ಟ ಪರಿಸ್ಥಿತಿಯಿಂದ ಅಭಿವೃದ್ಧಿಗಯೆಡೆಗೆ ಸಮರ್ಥವಾಗಿ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂಬ ಸುಳ್ಳು ಆರೋಪ ಕಾಂಗ್ರೆಸ್ ಹೊರಿಸುತ್ತಿದೆ. ಪ್ರಧಾನಿ ಮೋದಿ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಜನರಿಗೆ ತಪ್ಪು ಸಂದೇಶ ನೀಡುತ್ತ ತೆರಿಗೆ ಹಂಚಿಕೆಯಲ್ಲಿ ಅಸಮತೋಲನ ಎಂದು ಪ್ರತಿಭಟನೆಯ ನಾಟಕ ಮಾಡುತ್ತಿದೆ.
ಬಿಜೆಪಿ ಆಡಳಿತದಲ್ಲಿ ತಂದಿದ್ದ ಯೋಜನೆಗಳಾದ ಹೈನುಗಾರಿಕೆ ಪ್ರೋತ್ಸಾಹ ಧನ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ವಿದ್ಯಾ ನಿಧಿ ಮುಂತಾದ ಯೋಜನೆಗಳನ್ನು ನಿಲ್ಲಿಸಿ ವಿದ್ಯುತ್ ನೀರು ಬಸ್ ಹಾಗೂ ಇನ್ನಿತರ ದರಗಳ ಏರಿಕೆ ಮಾಡಿ ರಾಜ್ಯದ ಜನತೆಗೆ ಬರೆ ಎಳೆದಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.