SUDDIKSHANA KANNADA NEWS/ DAVANAGERE/ DATE:11-07-2024
ದಾವಣಗೆರೆ: ಆ ಗ್ರಾಮದಲ್ಲಿ ಒಂದೇ ದಿನ ಏಳು ಮಂದಿ ಸಾವು. ವಯೋಸಹಜ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಏಳು ಜನರು ಅಸುನೀಗಿದ್ದು, ಅಂತ್ಯಕ್ರಿಯೆ ನೆರವೇರಿಸಲು ಜಾಗ ಸಿಗದೇ ಗ್ರಾಮಸ್ಥರು, ಸಂಬಂಧಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಈ ಕಾರಣಕ್ಕೆ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ಕಾರಣಕ್ಕೆ ಒಂದೇ ದಿನ ಏಳು ಜನರ ಸಾವು ಕಂಡಿದ್ದು, ನಾಲ್ವರು ವಯೋಸಹಜದಿಂದ ಮೃತಪಟ್ಟರೆ,ಮೂವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಎರಡು ದಿನದ ನವಜಾತ ಶಿಶು ಸಹ ಕಣ್ಣುಮುಚ್ಚಿದೆ.
ಮಾರಿಯಕ್ಕ(70), ಸಂತೋಷ (30), ಈರಮ್ಮ (60), ಸುನಿಲ್ (25), ಶಾಂತಮ್ಮ ( 65)ಬಿಮಕ್ಕ (70), ಎರಡು ದಿನದ ನವಜಾತ ಶಿಶು ಮೃತಪಟ್ಟಿದ್ದು, ಅಂತ್ಯಕ್ರಿಯೆಗೆ ಸ್ಥಳ ನೀಡುವಂತೆ ಗ್ರಾಮಸ್ಥರು, ಸಂಬಂಧಿಕರು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆಯ ಹೊಸಕುಂದವಾಡದಲ್ಲಿ ನಡೆದಿದೆ,
ಗ್ರಾಮದಲ್ಲಿ 5000ಕ್ಕೂ ಹೆಚ್ಚು ಜನರು ವಾಸವಿದ್ದು, ಇದುವರೆಗೂ ಪಕ್ಕದ ಹಳೇ ಕುಂದುವಾಡ ಗ್ರಾಮಕ್ಕೆ ಹೋಗಿ ಗ್ರಾಮಸ್ಥರು ಶವಸಂಸ್ಕಾರ ನಡೆಸುತ್ತಿದ್ದರು. ಇತ್ತೀಚೆಗೆ ಹಬ್ಬದ ವಿಚಾರದಲ್ಲಿ ಎರಡು ಗ್ರಾಮಸ್ಥರ ಮಧ್ಯೆ ಮನಸ್ತಾಪ ಮೂಡಿತ್ತು. ಮನಸ್ತಾಪ ಹಿನ್ನೆಲೆ ಶವಸಂಸ್ಕಾರಕ್ಕೆ ಹಳೆಕುಂದುವಾಡ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದರು. ಶವಸಂಸ್ಕಾರಕ್ಕೆ ನಮ್ಮ ಗ್ರಾಮಕ್ಕೆ ಬರುವುದು ಬೇಡ. ನಿಮ್ಮ ಊರಿನಲ್ಲಿಯೇ ಶವಸಂಸ್ಕಾರ ಮಾಡಿ ಎಂದು ಹೇಳಿದರು. ಆದ್ರೆ, ಹಳೇ ಕುಂದುವಾಡ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ರುದ್ರಭೂಮಿ ಇಲ್ಲದ ಕಾರಣ ಹೊಸಕುಂದುವಾಡದವರು ಹಳೇ ಕುಂದುವಾಡದಲ್ಲಿಯೇ ಶವಸಂಸ್ಕಾರ ನಡೆಸುತ್ತಿದ್ದರು.
ನಿಮ್ಮ ಗ್ರಾಮದಲ್ಲಿ ನೀವು ಶವಸಂಸ್ಕಾರ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಹೊಸಕುಂದುವಾಡ ಗ್ರಾಮಸ್ಥರು ಆರೋಪಿಸಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದು, ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಮಾತ್ರವಲ್ಲ, ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.