SUDDIKSHANA KANNADA NEWS/ DAVANAGERE/ DATE:26-12-2024
ದಾವಣಗೆರೆ: ಜಿಲ್ಲೆಯ ಹೊನ್ನಾಳಿ – ನ್ಯಾಮತಿ ತಾಲೂಕಿನ ಹರಮಘಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಕೊಲ್ಲಲು ತಂದಿಟ್ಟಿದ್ದ 32 ಜೀವಂತ ನಾಡಮದ್ದು ಗುಂಡುಗಳನ್ನು ಪತ್ತೆ ಮಾಡಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುವ ವೇಳೆ 32 ಜೀವಂತ ನಾಡ ಮದ್ದು ಗುಂಡು ವಶಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳು ಅಧಿಕಾರಿಗಳು ಬರುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ.
ಫಲವನಹಳ್ಳಿ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದರು. ಈ ವೇಳೆ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದ ನಾಲ್ವರು ಎರಡು ಬೈಕ್ ಗಳಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದರು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ವಿಚಾರಿಸಲು ಮುಂದಾಗುತ್ತಿದ್ದಂತೆ ನಾಲ್ವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ನ್ಯಾಮತಿ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ, ಗಸ್ತು ಅರಣ್ಯ ಪಾಲಕರಾದ ಹೆಚ್. ಬಿ. ಅಂಜಲಿ, ಕ್ಷೇಮಾಭಿವೃದ್ಧಿ ಅರಣ್ಯ ವೀಕ್ಷಕ ಎಂ. ಪಿ. ಬಸವರಾಜಪ್ಪ, ನೆಡುತೋಪು ಕಾವಲುಗಾರರಾದ ಸುನೀಲ ಮತ್ತು ಪ್ರವೀಣ ಕಾರ್ಯಾಚರಣೆಯಲ್ಲಿ
ಪಾಲ್ಗೊಂಡಿದ್ದರು.
ಕೆಂಪು ಮತ್ತು ಹಳದಿ ಮಿಶ್ರಿತ ಕವರ್ ಗಳನ್ನು ಬೈಕ್ ಗಳಲ್ಲಿ ಬಂದಿದ್ದವರು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಬೈಕ್ ಬಳಿ ಹೋಗಿ ಪರಿಶೀಲನೆ ನಡೆಸಿದಾಗ 32 ನಾಡಮದ್ದು ಗುಂಡುಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ನಾಲ್ವರು ಆರೋಪಿಗಳ ಗುರುತು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೂಕಿನ ಮಾದಾಪುರ ಗ್ರಾಮದ ತಿಮ್ಮಪ್ಪ ಮತ್ತು ಗುಡ್ಡಪ್ಪ ಜೊತೆಗೆ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬರ್ತಕ್ ಅಲಿ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.