SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ:ಭತ್ತದ ಖರೀದಿದಾರರ ಒಳಸಂಚಿನಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲ. ಕ್ವಿಂಟಾಲ್ ಒಂದಕ್ಕೆ ₹2500 ರಿಂದ ₹2650 ರವರೆಗೆ ಭತ್ತದ ಧಾರಣೆ ನಡೆದಿದೆ. ಕಳೆದ ಬಾರಿ ತೀವ್ರ ಬರದಿಂದ ಬೆಳೆ ಬೆಳೆಯದೆ ತತ್ತರಿಸಿದ್ದ ರೈತರು ಈಗಲಾದರೂ ಉತ್ತಮ ಬೆಳೆ ಇದೆ ಆದ್ರೆ ಉತ್ತಮ ಬೆಲೆ ಇಲ್ಲದೆ ರೋಸಿ ಹೋಗಿದ್ದಾರೆ. ಆದ್ದರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಬೇಕು ಎಂದು ರೈತ ಒಕ್ಕೂಟವು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದೆ. ಈ ಸಂಬಂಧ ಮನವಿ ಸಲ್ಲಿಸಿದೆ.
ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆಯಲ್ಲಿ ಭತ್ತ ಬೆಳೆ ಬೆಳೆಯಲಾಗಿದ್ದು, ಕೊಯ್ಲು ಪ್ರಾರಂಭವಾಗಿದೆ. ಕಳೆದ ಬೇಸಿಗೆ ಹಂಗಾಮಿನಲ್ಲಿ ಮಳೆ ಇಲ್ಲದೆ ತೀವ್ರ ಬರ ಇದ್ದ ಕಾರಣದಿಂದ ರೈತರು ಬೆಳೆ ಬೆಳೆಯದೆ ಜಮೀನುಗಳನ್ನು ಬೀಳು ಬಿಟ್ಟಿದ್ದರು. ಹೀಗಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಈ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಭದ್ರಾ ಡ್ಯಾಂ ತುಂಬಿತ್ತು. ಬೆಳೆಯು ಚೆನ್ನಾಗಿರುವುದರಿಂದ ಜಿಲ್ಲೆಯಲ್ಲಿ 4.5 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪನ್ನವಾಗುವ ನಿರೀಕ್ಷೆ ಇದೆ ಎಂದು ಮುಖಂಡರು ತಿಳಿಸಿದ್ದಾರೆ.
ತಕ್ಷಣ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್ ಒಂದಕ್ಕೆ ₹2320 ದರ ನಿಗದಿಯಾಗಿದೆ. ಇದು ರೈತನ ಶ್ರಮಕ್ಕೆ ತಕ್ಕದ್ದಲ್ಲವಾಗಿದೆ. ಆದ್ದರಿಂದ ಕನಿಷ್ಠ ಬೆಂಬಲ ಬೆಲೆ ₹2320 ರ ಜೊತೆಗೆ ₹600 ಪ್ರೋತ್ಸಾಹ ಧನ ಸೇರಿಸಿ, ಕ್ವಿಂಟಲ್ ಒಂದಕ್ಕೆ ₹2920 ರಂತೆ ಖರೀದಿಸಬೇಕು. ಈ ಹಿಂದೆ ದಿನಾಂಕ 9ನೇ ಡಿಸೆಂಬರ್,2011 ರಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ್ರು ಭತ್ತದ ಕಣಜ ಗಂಗಾವತಿಯಲ್ಲಿ ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಿ, ಮಾತನಾಡುವಾಗ ಕನಿಷ್ಠ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಕ್ವಿಂಟಲ್ಗೆ ₹200 ಪ್ರೋತ್ಸಾಹ ಧನ ನೀಡಿ ಭತ್ತ ಖರೀದಿಸುವುದಾಗಿ ಘೋಷಣೆ ಮಾಡಿದ್ದರು. ಅದೇ ರೀತಿ ಈಗ ರಾಜ್ಯದ ಕಾಂಗ್ರೆಸ್ ಸರ್ಕಾರ ಕ್ವಿಂಟಲ್ ಒಂದಕ್ಕೆ ₹600 ಪ್ರೋತ್ಸಾಹ ಧನ ಘೋಷಣೆ ಮಾಡಿ, ಭತ್ತ ಖರೀದಿಸಬೇಕು ಎಂದು ಒತ್ತಾಯಿಸಿದರು.
ಖರೀದಿ ಕೇಂದ್ರಕ್ಕೆ ಧಾನ್ಯ ತರುವುದು ಮತ್ತು ಅಲ್ಲಿಂದ ಗೋದಾಮಿಗೆ ಸಾಗಿಸಲು (ಲೋಡಿಂಗ್-ಅನ್ ಲೋಡಿಂಗ್ ಹಮಾಲಿ ಸೇರಿ) ಸಾಗಾಣಿಕೆ ಗುತ್ತಿಗೆದಾರರನ್ನು ನೇಮಕ ಮಾಡಿ, ಪ್ರತ್ಯೇಕ ಅನುದಾನವನ್ನು ವ್ಯಯಿಸಲಾಗುತ್ತದೆ. ಆದರೆ ಈ ಸಾಗಾಣಿಕೆಯನ್ನು ರೈತರಿಂದಲೇ ಮಾಡಿಸಿ ಮತ್ತು ಲೋಡಿಂಗ್-ಅನ್ ಲೋಡಿಂಗ್ ಹಮಾಲಿ ವೆಚ್ಚವನ್ನು ರೈತರಿಂದಲೇ ಭರಿಸಿ, ಇದಕ್ಕಿಟ್ಟ ದುಡ್ಡನ್ನು ಅಧಿಕಾರಿಗಳು ಮತ್ತು ಸಾಗಾಣಿಕೆ ಗುತ್ತಿಗೆದಾರರು ಅಕ್ರಮವಾಗಿ ಗುಳುಂ ಮಾಡುತ್ತಾರೆ. ಆದ್ದರಿಂದ ರೈತನ ಹೊಲದಿಂದ ಖರೀದಿ ಕೇಂದ್ರಕ್ಕೆ ಹಾಗೂ ಗೋದಾಮಿಗೆ ಸರ್ಕಾರವೇ ಸಾಗಾಣಿಕೆ ಮಾಡಬೇಕು. ಇದಕ್ಕಿಟ್ಟ ದುಡ್ಡು ದುರುಪಯೋಗವಾಗಬಾರದು ಎಂದು ಮನವಿ ಮಾಡಿದರು.
ಎಪಿಎಂಸಿಯಲ್ಲಿ ಪ್ರತಿ ಮಂಡಿಯಲ್ಲಿ ಪ್ರತಿ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ಮಾಡಬೇಕು ಎಂಬ ನಿಯಮವಿದೆ. ಆದ್ರೆ ಈ ನಿಯಮವನ್ನು ಗಾಳಿಗೆ ತೂರಿ ಮನಬಂದಂತೆ ಖರೀದಿ ವಹಿವಾಟು ಮಾಡಲಾಗುತ್ತಿದೆ. ಇದರಿಂದ ಖರೀದಿದಾರರು-ವ್ಯಾಪಾರಸ್ಥರು ಒಳಸಂಚು ರೂಪಿಸಿ, ಧಾರಣೆಯನ್ನು ನಿಯಂತ್ರಿಸುತ್ತಿದ್ದಾರೆ. ಇಂತಹ ವಹಿವಾಟನ್ನು ನಿಯಂತ್ರಿಸಿ, ನ್ಯಾಯಯುತ ಖರೀದಿ ವಹಿವಾಟು ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿಯಲ್ಲಿ ದಲಾಲಿ ಪಡೆಯುವುದು, ತೂಕದಲ್ಲಿ ವಂಚನೆ, ತಳಗಾಲು ಪಡೆಯುವುದು ಸೇರಿದಂತೆ ನಾನಾ ರೀತಿಯಲ್ಲಿ ರೈತರನ್ನು ಶೋಷಿಸಲಾಗುತ್ತಿದೆ. ಇಂತಹ ಶೋಷಣೆ ನಿಲ್ಲಬೇಕು. ರೈತರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರೈತ ಒಕ್ಕೂಟದ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಮಾಜಿ ಎಪಿಎಂಸಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಮಹಾನಗರಪಾಲಿಕೆ ಮಾಜಿ ಸದಸ್ಯ ಹೆಚ್ ಎನ್ ಶಿವಕುಮಾರ್, ಆರನೇ ಕಲ್ಲು ವಿಜಯಕುಮಾರ್, ಕಬ್ಬೂರು ಶಿವಕುಮಾರ್, ಕುಂದುವಾಡದ ಪುನೀತ್, ಮಹೇಶಪ್ಪ, ಜಿಮ್ಮಿ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು .
ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ ತಕ್ಷಣವೇ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಮಂಡಿಯಲ್ಲಿ ಪ್ರತಿ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ನಡೆಯುವಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು. ದಲಾಲಿ, ತೂಕದಲ್ಲಿ ವಂಚನೆ, ತಳಗಾಲು ಪಡೆಯುವುದು ನಿಯಮಬಾಹಿರ. ಇವುಗಳನ್ನು ನಿಯಂತ್ರಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.