SUDDIKSHANA KANNADA NEWS/ DAVANAGERE/ DATE:23-02-2025
ದಾವಣಗೆರೆ: ನಿಧಾನವಾದರೂ ಪರವಾಗಿಲ್ಲ. ರಾಜಕಾರಣದಲ್ಲಿ ಮುಂದೆ ಉಜ್ವಲ ಭವಿಷ್ಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ನಗರದ ಎಸ್. ಎಸ್. ಬಡಾವಣೆಯ ಎ ಬ್ಲಾಕ್ 10 ನೇ ಕ್ರಾಸ್ ನಲ್ಲಿರುವ ಸ್ವಾಭಿಮಾನಿ ಬಳಗದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ “ಸಂವಿಧಾನವೇ ನಮ್ಮ ಸಿದ್ಧಾಂತ” ಸಂಘಟನಾ ಸಭೆ ಹಾಗೂ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳ ರಚನೆ ಹಾಗೂ ಮೈಸೂರಿನಲ್ಲಿ ನಡೆಯುವ 2 ದಿನಗಳ ನಾಯಕತ್ವ – ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಸಂಘಟನೆ ಬಗ್ಗೆ ಮುಕ್ತ ಚರ್ಚೆ ನಡೆಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಭಾಷಣ ಮಾಡಿದರು
ಭಯಮುಕ್ತ ವಾತಾವರಣ ನಿರ್ಮಾಣ ಆದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ. ದಾಸ್ಯ, ಗುಲಾಮಗಿರಿಯತ್ತ ಸಾಗಿದರೆ ಶಕ್ತಿ ಕುಂಠಿತವಾಗುತ್ತದೆ. ರಾಜಕಾರಣಕ್ಕೆ ಹೆದರಿ, ಸಣ್ಣಪುಟ್ಟ ಹುದ್ದೆ ಹೋಗುತ್ತವೆ ಎಂಬ ಕಾರಣಕ್ಕೆ ದಾಸರಾಗಿ ಕೆಲವರು ಬದುಕುತ್ತಿದ್ದಾರೆ. ಅವರಿನ್ನೂ ಭಯದಿಂದ ಹೊರಗೆ ಬಂದಿಲ್ಲ. ಭಯದಿಂದ ಜನರನ್ನು ಹೊರ ತರಲು ಸಾಧ್ಯವಿರುವುದು ಶಿಕ್ಷಣದಿಂದ ಮಾತ್ರ. ಇಂದಿನ ಶೇಕಡಾ 90ರಷ್ಟು ಮಕ್ಕಳಿಗೆ ನ್ಯಾಯಯುತ ಮತ್ತು ಭಯಮುಕ್ತ ವಿದ್ಯಾಭ್ಯಾಸ ಸಿಗುತ್ತಿಲ್ಲ ಎಂದೆನಿಸುತ್ತಿದೆ. ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನ ನಡೆಸಿದಾಗ ಇದು ಮನವರಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲ, ಗ್ರಂಥಾಲಯ ಇದ್ದರೂ ಕಾರ್ಯಾಚರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಭಿಮಾನ ಇದ್ದವರು ಬೇರೆಯವರ ಬಳಿ ಹೋಗಿ ಬೇಡುವುದಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ನಾಯಕರು ತಪ್ಪು ಎಂದರೆ, ಜನರು ಸರಿ ಎಂದರು. ಸಿದ್ದರಾಮಯ್ಯ, ಸಚಿವರ ಬಳಿ ಗುರುತಿಸಿಕೊಳ್ಳುವುದು, ಹಿಂದೆ ಮುಂದೆ ಓಡಾಡೋದು, ಮನೆಯೊಳಗೆ ಭಯವಿಲ್ಲದೇ ಓಡಾಡಿದರೆ ಅದೇ ದೊಡ್ಡ ಸಾಧನೆ ಎಂದು ಕೆಲವರು ಭಾವಿಸಿದ್ದಾರೆ. 20 ವರ್ಷ ಹಿಂಬಾಲಕರಾಗಿ ಓಡಾಡಿ ಸಣ್ಣಪುಟ್ಟ ಹುದ್ದೆ ಪಡೆದು ತೃಪ್ತಿಪಟ್ಟುಕೊಳ್ಳುತ್ತಾರೆ. ಸ್ವಾಭಿಮಾನಿಗಳ ಬೆಂಬಲಿಸಿದರೆ ಇದಕ್ಕೆ ಕುತ್ತು ಬರುತ್ತೆ ಎಂಬ ಭಯ ಅವರಲ್ಲಿ ಇದೆ. ನಾನು ಸ್ವಾರ್ಥಿ ಆಗಿದ್ದರೆ ಸಿದ್ದರಾಮಯ್ಯರ ಕಾರಿನಲ್ಲೂ ಪ್ರಯಾಣಿಸಬಹುದಿತ್ತು. ಸಾಮಾನ್ಯನಾಗಿ ಐಎಎಸ್ ಇನ್ ಸೈಟ್ಸ್ ಸಂಸ್ಥೆ ಹುಟ್ಟು ಹಾಕಿದ್ದೇನೆ. ಕಷ್ಟಪಟ್ಟು ಕಟ್ಟಿದ್ದೇನೆ. ಯಾವ ಪಕ್ಷದವರೊಂದಿಗೆ ವ್ಯವಹಾರ ಹೊಂದಿಲ್ಲ. ರಾಜಕಾರಣಿಗಳ ಬಳಿ ಏನನ್ನೂ ಕೇಳಿಕೊಂಡಿಲ್ಲ. ಸ್ವಾಭಿಮಾನ ಉಳಿಸಿಕೊಂಡು
ಬಂದಿದ್ದೇನೆ. ನಿಧಾನ ಆದರೂ ಪರವಾಗಿಲ್ಲ, ರಾಜಕಾರಣದಲ್ಲಿ ಮುಂದೆ ಉಜ್ವಲ ಭವಿಷ್ಯ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಮರಾಠಿಗರು ಕಲ್ಲು ಹೊಡೆದಾಗ ಕನ್ನಡ ಜಾಗೃತವಾಗುತ್ತದೆ. ಆಗ ಭಾವಾನಾತ್ಮಕವಾಗಿ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತದೆ. ಆದ್ರೆ, ಕನ್ನಡ ಉಳಿಯಬೇಕು, ಬೆಳೆಯಬೇಕು ಎಂದರೆ ಸರ್ಕಾರಿ ಶಾಲೆಗಳು ಉಳಿಯುವ ಜೊತೆಗೆ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಬಳಗದ ಪ್ರಮುಖರಾದ ರಾಜು ಮೌರ್ಯ, ವಿರೂಪಾಕ್ಷಪ್ಪ ಪಂಡಿತ್, ಗೀತಾ ಮುರುಗೇಶ್, ಕೇಶವಮೂರ್ತಿ, ಗಂಗಾಧರ್, ಪುರಂದರ ಲೋಕಿಕೆರೆ, ಶಿವಕುಮಾರ್ ಡಿ. ಶೆಟ್ಟರ್, ಮೊಹಮ್ಮದ್ ಸಾಧಿಕ್, ಎಂ. ಪ್ರವೀಣ್ ಕುಮಾರ್, ಎಂ. ರಾಮಕೃಷ್ಣ, ಸುದೀಪ್ ಮತ್ತಿತರರು ಪಾಲ್ಗೊಂಡಿದ್ದರು.