SUDDIKSHANA KANNADA NEWS/ DAVANAGERE/ DATE:23-02-2025
ದಾವಣಗೆರೆ: ಸ್ವಾಭಿಮಾನಿ ಬಳಗದ ಮೂಲಕ ರಾಜಕೀಯ ಕ್ರಾಂತಿಗೆ ಮುಂದಾಗಿರುವ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಇದ್ದೇ ಇದೆ. ಈ ಬಗ್ಗೆ ಸ್ವತಃ ವಿನಯ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಗರದ ಎಸ್. ಎಸ್. ಬಡಾವಣೆಯ ಎ ಬ್ಲಾಕ್ 10 ನೇ ಕ್ರಾಸ್ ನಲ್ಲಿರುವ ಸ್ವಾಭಿಮಾನಿ ಬಳಗದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ “ಸಂವಿಧಾನವೇ ನಮ್ಮ ಸಿದ್ಧಾಂತ” ಸಂಘಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಯಾವ ಭಾಗಕ್ಕೂ ಹೋದರೂ ಜನರು ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ನಮ್ಮ ತಾಲೂಕಿಗೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಇದು ಖುಷಿಯ ವಿಚಾರ. ಸ್ವಾಭಿಮಾನಿಗಳು ಹೆಚ್ಚಾಗಿ ಬರುತ್ತಿದ್ದಾರೆ. ದಿನಕಳದಂತೆ ಹೆಚ್ಚು ಹೆಚ್ಚಾಗಿ ಜನರು ಬರತೊಡಗಿದ್ದಾರೆ. ಇದು ಸ್ವಾಭಿಮಾನದ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲೂ ಸಾಕಷ್ಟು ಒತ್ತಡ ಇದೆ. ಕಳೆದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದ ಇಲ್ಲಿಯವರೆಗೆ ಅನೇಕ ಜನರು ಜೊತೆಗಿದ್ದಾರೆ. ಕೆಲವರು ಹೋಗಿರಬಹುದು. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ನಿಸ್ವಾರ್ಥತೆಯಿಂದ ಬರುವವರಿಗೆ ಯಾವಾಗಲೂ ಸ್ವಾಗತ ಇದ್ದೇ ಇರುತ್ತದೆ. ದಾವಣಗೆರೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಇದೆ ಎಂದು ಅವರು ತಿಳಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನಾಲ್ಕು ಕ್ಷೇತ್ರಗಳಿಂದಲೂ ಒತ್ತಡ ಇದೆ. ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೊನ್ನಾಳಿ, ಹರಿಹರ, ದಾವಣಗೆರೆ ಉತ್ತರ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜನರು ಕೇಳಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಬಗ್ಗೆ ಯಾವುದೇ ನಿರ್ಧಾರ ಈವರೆಗೂ ತೆಗೆದುಕೊಂಡಿಲ್ಲ ಎಂದು ಜಿ. ಬಿ. ವಿನಯ್ ಕುಮಾರ್ ಸ್ಪಷ್ಟನೆ ನೀಡಿದರು.
ಇನ್ನು ಹರಿಹರ ಅಥವಾ ಹೊನ್ನಾಳಿ ಸ್ಪರ್ಧೆಗಿಳಿಯಬೇಕೆಂದು ಸಭೆಗೆ ಆಗಮಿಸಿದ್ದ ಈ ಭಾಗದವರು ಒತ್ತಾಯಿಸಿದರು. ಇದಕ್ಕೆ ನಾನು ಈಗಲೇ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲರೂ ತೋರುತ್ತಿರುವ ಪ್ರೀತಿ, ವಿಶ್ವಾಸ ಹಾಗೂ ತೋರುತ್ತಿರುವ ಆತ್ಮಸ್ಥೈರ್ಯಕ್ಕೆ ಚಿರಋಣಿಯಾಗಿದ್ದೇನೆ. ಈಗ ಸಂಘಟನೆಯತ್ತ ಚಿತ್ತ ನೆಟ್ಟಿದೆ. ಮುಂಬರುವ ದಿನಗಳಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರುತ್ತೇನೆ ಎಂದು ಅವರು ತಿಳಿಸಿದರು.