SUDDIKSHANA KANNADA NEWS/ DAVANAGERE/ DATE:09-02-2025
ದಾವಣಗೆರೆ: ಮಾಧ್ಯಮಗಳು ಬೋಗಸ್ ವರದಿ ಬಿಡಬೇಕು. ಮಾಧ್ಯಮಗಳ ವಿಶ್ವಾಸರ್ಹತೆ ಕಡಿಮೆಯಾಗುತ್ತಿದೆ. ಸತ್ಯ ತೋರಿಸಿ. ನೀವೂ ವಿಜಯೇಂದ್ರ ಪರ ಇದ್ದೀರಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.
ನಾನು ದೆಹಲಿಗೆ ಹೋದಾಗ ಯಾರು ಸಿಕ್ಕರು, ಯಾರು ಸಿಗಲಿಲ್ಲ ಎಂದು ಯಾಕೆ ಹೇಳಬೇಕು? ಪಕ್ಷದ ವರಿಷ್ಠರು ಭೇಟಿಯಾಗಿದ್ದು ನಿಮಗೇಕೆ ತೋರಿಸಬೇಕು. ನೀವು ನಮ್ಮ ಪರವಾಗಿಲ್ಲ. ವಿಜಯೇಂದ್ರ ಪರವಾಗಿದ್ದೀರಾ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಗುಡುಗಿದರು.
ನಮಗೆ ನಡ್ಡಾ ಬಾಯಿಗೆ ಬಂದಂಗೆ ಬೈದರು. ಕೂರಿಸಲಿಲ್ಲ, ಚಹಾ ಕೊಡಲಿಲ್ಲ, ಯತ್ನಾಳ್ ಟೀಂಗೆ ಭಾರೀ ಮುಖಭಂಗ ಎಂದೆಲ್ಲಾ ಸುದ್ದಿ ಬಂದಿವೆ. ಸತ್ಯ ಹೇಳಿ. ಸುಮ್ಮಸುಮ್ಮನೆ ಸುಳ್ಳು ಹೇಳುತ್ತೀರಾ. ಪೇಯ್ಡ್ ಲೇಖನ ಬರೆಯುವವರು ಇದ್ದಾರೆ. ಯತ್ನಾಳ್ ಗೆ ಅಪಮಾನ ಆಗಿದೆ. ಸೂರ್ಯ ಚಂದ್ರ ಇರುವವರೆಗೆ ವಿಜಯೇಂದ್ರ ರಾಜ್ಯಾಧ್ಯಕ್ಷರು, ಮುಂದಿನ ಮುಖ್ಯಮಂತ್ರಿ ಎಂದು ಬರೆಯುತ್ತೀರಾ. ಕೆಲ ಚಾನೆಲ್ ಗಳ ಬಾಸುಗಳು ವಿಜಯೇಂದ್ರ ಪರ ಇರುತ್ತಾರೆ, ಇದ್ದಾರೆ. ವಿಜಯೇಂದ್ರ
ಪರ ಕೆಲವು ಮಂದಿ ನೀವೂ ಇದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀವೂ ನನ್ನನ್ನು ಟಿವಿಯಲ್ಲಿ ತೋರಿಸುತ್ತಿರಲಿಲ್ಲ. ನನ್ನಿಂದ ಟಿಆರ್ ಪಿ ನಿಮಗೆ ಬರುತ್ತೆ ಎಂಬ ಕಾರಣಕ್ಕೆ ತೋರಿಸುತ್ತೀರಾ. ನೀವು ಗಾಬರಿ ಆಗಬೇಡಿ, ವಿಜಯೇಂದ್ರನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂದು. ಕೆಲ ಚಾನೆಲ್ ಗಳ ಬಾಸ್ ಗಳಿಗೆ
ಹೆದರಿಕೆ ಇದೆ. ಯತ್ನಾಳ್ ಗೆ ಅಪಮಾನ, ಹಿನ್ನಡೆ, ಈ ಗುಂಪಿಗೆ ಮಹತ್ವವೇ ಕೊಡಲಿಲ್ಲ ಎಂದೆಲ್ಲಾ ಸುದ್ದಿ ಬಿತ್ತರಿಸುತ್ತೀರಾ. ನಿಮ್ಮ ಕೆಲಸ ನೀವೂ ಮಾಡಿಕೊಂಡು ಹೋಗಿ, ನಮ್ಮ ಕೆಲಸ ಮಾಡಿಕೊಂಡು ಹೋಗ್ತೇವೆ ಎಂದು ಕಿಡಿಕಾರಿದರು.
ಮತ್ತೆ ಅಪಮಾನ ಖಚಿತ, ವಿಜಯೇಂದ್ರ ಮುಂದುವರಿಕೆ, ಯತ್ನಾಳ್ ಗೆ ನಿರಾಸೆ ಎಂದು ನೀವೂ ಲೇಖನ ಬರೆಯಿರಿ, ಟಿವಿಯಲ್ಲಿ ತೋರಿಸಿ. ನಮ್ಮ ಪ್ರಯತ್ನ ನಡೆಯುತ್ತದೆ. ಭ್ರಷ್ಟಾಚಾರದ ಸಲುವಾಗಿಯೇ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸೋತಿತು. ಬಿಜೆಪಿ ಸರ್ಕಾರ ಬಂತು. ಹಾಲಿ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋದವರನ್ನು ಪಕ್ಷದಿಂದ ದೂರವಿಡಬೇಕು ಎಂಬುದು ನಮ್ಮ ಬೇಡಿಕೆ. ಬೆಡ್ ಶೀಟ್ ಹಾಕಿಕೊಂಡು ಕೇಜ್ರಿವಾಲ್ ಜೈಲಿಗೆ ಹೋದರು. ರಾಜ್ಯದಲ್ಲಿಯೂ ಜೈಲಿಗೆ ಹೋದವರಿದ್ದಾರಲ್ವಾ? ಮಾಧ್ಯಮದವರಿಗೆ ವಿಜಯೇಂದ್ರ ಬೇಕಾಗಿದೆ. ಹಾಗಾಗಿ ಏನೋನೋ ಸುದ್ದಿ ಮಾಡುತ್ತೀರಾ. ಮುಂದುವರಿಸಿಕೊಂಡು ಹೋಗಿ ಎಂದರು.