
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿರುವ ‘ಎವ್ರಿಬಡಿ ಈಸ್ ಫ್ರಮ್ ದಿ ವಿಲೇಜ್, ಶನಾಯಾ’ (Everybody is from the village, Shanaya) ಟ್ರೆಂಡ್ ಹಿಂದಿರುವ ಸೃಷ್ಟಿಕರ್ತೆ ದಿವ್ಯಾಂಶಿ ಚೌಹಾಣ್, ಇದು ಸ್ತ್ರೀದ್ವೇಷ (Misogynistic) ಎಂದು ಟೀಕಿಸುತ್ತಿರುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಹಳ್ಳಿಗಳಿಂದ ನಗರಗಳಿಗೆ ಬರುವವರ ವಿರುದ್ಧದ ಜಾತಿವಾದ ಮತ್ತು ವರ್ಗವಾದಿ ಧೋರಣೆಗಳನ್ನು ಪ್ರಶ್ನಿಸಿ ಆರಂಭವಾದ ಈ ವಿಡಿಯೋ 36 ಮಿಲಿಯನ್ಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಏಪ್ರಿಲ್ನಲ್ಲಿ 22 ವರ್ಷದ ದಿವ್ಯಾಂಶಿ ಚೌಹಾಣ್ ಹಂಚಿಕೊಂಡಿದ್ದ ವಿಡಿಯೋದಲ್ಲಿ, ನಗರವಾಸಿಗಳ ಸೋಗಲಾಡಿತನವನ್ನು ವ್ಯಂಗ್ಯವಾಡಲಾಗಿತ್ತು. “ನೀವು ನೋಡಲು ಹಳ್ಳಿಯವ್ರ ತರ ಕಾಣ್ತೀರಾ” ಎನ್ನುವ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ್ದ ದಿವ್ಯಾಂಶಿ, “ಎಲ್ಲರೂ ಹಳ್ಳಿಯಿಂದಲೇ ಬಂದವರು ಶನಾಯಾ, ನಿಮ್ಮ ಪೂರ್ವಿಕರು ಮುಂಬೈನ ಬಾಂದ್ರಾ ಬೌಜಿ ಕೆಫೆ ಬಳಿ ಅವೋಕಾಡೊ ಟೋಸ್ಟ್ ತಿನ್ನುತ್ತಾ ಹುಟ್ಟಿದ್ರಾ?” ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಈ ಟ್ರೆಂಡ್ಗೆ ಸೆಲೆಬ್ರಿಟಿಗಳಾದ ಶೆಫ್ ರಣವೀರ್ ಬ್ರಾರ್ ಹಾಗೂ ನಟಿ ಶನಾಯ್ ಕಪೂರ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಆದರೆ, ವಿಡಿಯೋದಲ್ಲಿ ಪುರುಷರ ಹೆಸರಿನ ಬದಲು ‘ಶನಾಯಾ’ ಎಂಬ ಮಹಿಳಾ ಹೆಸರು ಬಳಸಿದ್ದರಿಂದ ಇದು ಮಿಸೋಜಿನಿಟಿ ಎಂದು ಕೆಲವರು ಟೀಕಿಸಿದ್ದರು.
ಟೀಕೆಗಳಿಗೆ ತಿರುಗೇಟು: ಮಹಿಳೆಯರು ಜಾತಿವಾದಿ ಅಥವಾ ವರ್ಗವಾದಿಗಳಾಗಲು ಸಾಧ್ಯವಿಲ್ಲ ಎಂಬ ಪೂರ್ವಗ್ರಹವೇ ಅಸಲಿ ಲೈಂಗಿಕ ತಾರತಮ್ಯ (Sexism) ಎಂದು ದಿವ್ಯಾಂಶಿ ಚೌಹಾಣ್ ವಾದಿಸಿದ್ದಾರೆ.
ಮಹಿಳೆಯರ ತಪ್ಪನ್ನು ತಿದ್ದುವುದರಲ್ಲಿ ತಪ್ಪಿಲ್ಲ: ಒಬ್ಬ ನಿರ್ದಿಷ್ಟ ಮಹಿಳೆಯ ಸಮಸ್ಯೆಯುಕ್ತ ವರ್ತನೆಯನ್ನು ಪ್ರಶ್ನಿಸುವುದು ಅಥವಾ ಎತ್ತಿ ತೋರಿಸುವುದು ಎಂದಿಗೂ ಸ್ತ್ರೀದ್ವೇಷ (Misogyny) ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವೈರಲ್ ಟ್ರೆಂಡ್ ಮೂಲ ಉದ್ದೇಶ: ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಬರುವವರು ಎದುರಿಸುವ ವರ್ಗ ಹಾಗೂ ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತುವುದೇ ಈ ಟ್ರೆಂಡ್ ಮೂಲ ಉದ್ದೇಶವಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಈ ಟ್ರೆಂಡ್ಗೆ ಸಿಲೆಬ್ರಿಟಿಗಳು ಸೇರಿದಂತೆ ಲಕ್ಷಾಂತರ ನೆಟ್ಟಿಗರು ಸಾಥ್ ನೀಡಿದ್ದು, ಪ್ರಸ್ತುತ ಇದು ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಮೌಲ್ಯಗಳ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.




