SUDDIKSHANA KANNADA NEWS/ DAVANAGERE/ DATE:19-02-2024
ದಾವಣಗೆರೆ: ಸದಾ ಬ್ಯುಸಿಯಾಗಿರುತ್ತಿದ್ದ ಹೊನ್ನಾಳಿ ಮಾಜಿ ಶಾಸಕ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ಇಂದು ಮಧ್ಯಾಹ್ನದಿಂದ ಮೊಬೈಲ್ ಸ್ವಿಚ್ ಆಫ್ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಎಂ. ಪಿ. ರೇಣುಕಾಚಾರ್ಯರು, ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ…?
ಹೊನ್ನಾಳಿ -ನ್ಯಾಮತಿ ಅವಳಿ ತಾಲ್ಲೂಕಿನ ಬಂಧುಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಕಳೆದ ಮೂರು ದಿನಗಳಿಂದ ನನ್ನ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರೂ ಸಹ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಇಂದು ಅನಿವಾರ್ಯ ಪರಿಸ್ಥಿತಿಯ ಕಾರಣ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುತ್ತಿದ್ದೇನೆ.
ಈ ದಿನದ ನಿಗದಿತ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ನನ್ನ ಪರವಾಗಿ ನನ್ನ ಸಹೋದರ ಎಂ.ಪಿ. ಬಸವರಾಜು ಭಾಗಿಯಾಗುತ್ತಿದ್ದು ವೈದ್ಯರ ಸಲಹೆ ಮೇರೆಗೆ ಇಂದು ಮಧ್ಯಾಹ್ನದ ನಂತರ ನನ್ನ ದೂರವಾಣಿಯನ್ನು ಸ್ವಿಚ್ ಆಫ್ ಮಾಡಿ ವಿಶ್ರಾಂತಿ ಪಡೆಯಲಿದ್ದೇನೆ. ಯಾರೂ ಕೂಡ ಅನ್ಯತಾ ಭಾವಿಸಬೇಡಿ, ಮುಂದಿನ ದಿನಗಳಲ್ಲಿ ನಾನು ಕೆಲವು ಗ್ರಾಮದ ಮನೆಗಳಿಗೆ ಭೇಟಿ ನೀಡುತ್ತೇನೆ. ನಿಮ್ಮ ಆಶೀರ್ವಾದ ಹಾರೈಕೆ ಸದಾ ಹೀಗೆ ಇರಲೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.ಇಂತಿ ನಿಮ್ಮ ಮನೆಯ ಮಗ, ನಿಮ್ಮ ಸೇವಕ ಎಂ.ಪಿ.ರೇಣುಕಾಚಾರ್ಯ ಎಂದು ತಿಳಿಸಿದ್ದಾರೆ.