Home ಕ್ರೈಂ ನ್ಯೂಸ್ ಫಲವತ್ತತೆ ದರ ಕುಸಿದರೂ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ವೇಗವಾಗಿ ಬೆಳೆಯಲು ಕಾರಣವೇನು?: ಪ್ಯೂ ಸಂಶೋಧನಾ ವರದಿಯ ಅಸಲಿ ಸತ್ಯ ಇಲ್ಲಿದೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಫಲವತ್ತತೆ ದರ ಕುಸಿದರೂ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ವೇಗವಾಗಿ ಬೆಳೆಯಲು ಕಾರಣವೇನು?: ಪ್ಯೂ ಸಂಶೋಧನಾ ವರದಿಯ ಅಸಲಿ ಸತ್ಯ ಇಲ್ಲಿದೆ!

Share
ಮುಸ್ಲಿಂ
Share

ನವದೆಹಲಿ: ಭಾರತದಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ದರ (Fertility Rate) ಗಣನೀಯವಾಗಿ ಇಳಿಕೆಯಾಗುತ್ತಿದ್ದರೂ, 2070ರ ವೇಳೆಗೆ ದೇಶದ ಮುಸ್ಲಿಂ ಜನಸಂಖ್ಯೆಯು ಸುಮಾರು ಶೇ. 57ರಷ್ಟು ಹೆಚ್ಚಾಗಲಿದೆ ಎಂದು ‘ಪ್ಯೂ ರಿಸರ್ಚ್ ಸೆಂಟರ್’ (Pew Research Center) ತನ್ನ ಹೊಸ ವರದಿಯಲ್ಲಿ ತಿಳಿಸಿದೆ.

ಈ ಅವಧಿಯಲ್ಲಿ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಪ್ರಸ್ತುತ ಇರುವ ಶೇ. 15ರಿಂದ ಶೇ. 20ಕ್ಕೆ ಏರಿಕೆಯಾಗಲಿದ್ದು, ಹಿಂದೂಗಳು ಶೇ. 76ರಷ್ಟು ಪಾಲಿನೊಂದಿಗೆ ದೇಶದ ಬಹುಸಂಖ್ಯಾತರಾಗಿಯೇ ಮುಂದುವರಿಯಲಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ.

ನವೆಂಬರ್ 18ರಂದು ಬಿಡುಗಡೆಯಾದ ‘ದಿ ಫ್ಯೂಚರ್ ಆಫ್ ವರ್ಲ್ಡ್ ರಿಲಿಜನ್ಸ್: ಪಾಪ್ಯುಲೇಶನ್ ಗ್ರೋತ್ ಪ್ರೊಜೆಕ್ಷನ್ಸ್, 2020–2070’ ವರದಿಯ ಪ್ರಕಾರ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಫಲವತ್ತತೆ ಅಂತರ ಕಡಿಮೆಯಾಗುತ್ತಿದ್ದರೂ ಮುಸ್ಲಿಂ ಜನಸಂಖ್ಯೆ ವೇಗವಾಗಿ ಬೆಳೆಯಲು ಸಮುದಾಯದ ‘ಯುವ ವಯೋಮಾನದ ರಚನೆ’ (Younger Age Profile) ಪ್ರಮುಖ ಕಾರಣವಾಗಿದೆ. 2020ರಲ್ಲಿ ಭಾರತೀಯ ಮುಸ್ಲಿಮರ ಸರಾಸರಿ ವಯಸ್ಸು (Median Age) 24 ವರ್ಷವಾಗಿದ್ದರೆ, ಹಿಂದೂಗಳ ಸರಾಸರಿ ವಯಸ್ಸು 29 ವರ್ಷವಾಗಿತ್ತು. ಈ 5 ವರ್ಷಗಳ ವಯಸ್ಸಿನ ಅಂತರವು ಮುಂಬರುವ ದಶಕಗಳಲ್ಲಿ ಜನಸಂಖ್ಯಾ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರಲಿದೆ.

ಜನಸಂಖ್ಯಾ ಆವೇಗ : ಮುಸ್ಲಿಂ ಸಮುದಾಯದಲ್ಲಿ ಸಂತಾನೋತ್ಪತ್ತಿ ವಯಸ್ಸಿಗೆ ಬರುವ ಯುವಜನರ ಸಂಖ್ಯೆ ಹೆಚ್ಚಿರುವುದರಿಂದ, ಪ್ರತಿ ಮಹಿಳೆಗೆ ಜನಿಸುವ ಮಕ್ಕಳ ಸರಾಸರಿ ಸಂಖ್ಯೆ ಕಡಿಮೆಯಾದರೂ ಒಟ್ಟು ಜನಸಂಖ್ಯೆ ಏರಿಕೆಯಾಗುತ್ತಲೇ ಇರುತ್ತದೆ. 2020ರಲ್ಲಿ 21.3 ಕೋಟಿಯಷ್ಟಿದ್ದ ಮುಸ್ಲಿಂ ಜನಸಂಖ್ಯೆ 2070ರ ವೇಳೆಗೆ 33.4 ಕೋಟಿಗೆ ತಲುಪುವ ಅಂದಾಜಿದೆ.

ಫಲವತ್ತತೆ ದರದಲ್ಲಿ ತೀವ್ರ ಇಳಿಕೆ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, 1992-93ರಲ್ಲಿ 4.4 ಇದ್ದ ಮುಸ್ಲಿಂ ಮಹಿಳೆಯರ ಫಲವತ್ತತೆ ದರ 2019-21ರ ವೇಳೆಗೆ 2.36ಕ್ಕೆ (ಅರ್ಧದಷ್ಟು) ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂ ಮಹಿಳೆಯರ ಫಲವತ್ತತೆ ದರ 3.3ರಿಂದ 1.94ಕ್ಕೆ ಕುಸಿದಿದೆ.

ಬಹುಸಂಖ್ಯಾತ ಸ್ಥಾನಕ್ಕೆ ಧಕ್ಕೆಯಿಲ್ಲ: 2020ರಿಂದ 2070ರ ನಡುವೆ ಹಿಂದೂ ಜನಸಂಖ್ಯೆಗೆ ಬರೋಬ್ಬರಿ 17.6 ಕೋಟಿ ಜನರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. 79ರಿಂದ ಶೇ. 76ಕ್ಕೆ ತುಸು ಇಳಿಕೆಯಾದರೂ, ಭಾರತದಲ್ಲಿ ಹಿಂದೂಗಳು ಅತ್ಯಧಿಕ ಬಹುಸಂಖ್ಯಾತರಾಗಿಯೇ ಉಳಿಯಲಿದ್ದಾರೆ.

ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ: 2070ರ ವೇಳೆಗೆ ಇಂಡೋನೇಷ್ಯಾವನ್ನು ಹಿಂದಿಕ್ಕಿ ಪಾಕಿಸ್ತಾನ ಮೊದಲ ಸ್ಥಾನಕ್ಕೇರಿದರೆ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ವರದಿ ಹೇಳಿದೆ.

ಮಹಿಳೆಯರ ಶಿಕ್ಷಣದ ಮಟ್ಟ ಸುಧಾರಣೆ ಮತ್ತು ಕುಟುಂಬ ಯೋಜನೆಗಳ ಅಳವಡಿಕೆಯಿಂದಾಗಿ 2100ರ ವೇಳೆಗೆ ಎರಡೂ ಸಮುದಾಯಗಳ ಫಲವತ್ತತೆ ದರವು ಬಹುತೇಕ ಸಮಾನವಾಗಲಿದೆ ಎಂದು ಪ್ಯೂ ವರದಿ ಅಂದಾಜಿಸಿದೆ. ಜನಸಂಖ್ಯಾ ಬದಲಾವಣೆಗೆ ಸಾಮೂಹಿಕ ಮತಾಂತರ ಕಾರಣವಲ್ಲ, ಬದಲಾಗಿ ವಯಸ್ಸಿನ ರಚನೆ ಮತ್ತು ಜನನ-ಮರಣ ಪ್ರಮಾಣಗಳೇ ಮುಖ್ಯ ಕಾರಣ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

Share

Recent Comments

No comments to show.
Related Articles