
ಲುಧಿಯಾನ: ಪಂಜಾಬ್ನ ಲುಧಿಯಾನದಲ್ಲಿ ನಡೆದ ದರೋಡೆ ಯತ್ನದ ವೇಳೆ ಶಸ್ತ್ರಸಜ್ಜಿತ ಇಬ್ಬರು ದರೋಡೆಕೋರರ ವಿರುದ್ಧ ಮೆಡಿಕಲ್ ಅಂಗಡಿಯ ಮಾಲೀಕ ಧೈರ್ಯದಿಂದ ಹೋರಾಡಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ.
ರಾತ್ರಿ ಸುಮಾರು 9:25ರ ಸುಮಾರಿಗೆ ಇಬ್ಬರು ಮುಖಗವಸು ಧರಿಸಿದ ವ್ಯಕ್ತಿಗಳು ಮೆಡಿಕಲ್ ಅಂಗಡಿಗೆ ನುಗ್ಗಿ, ಮಾಲೀಕ ಗುರ್ಮೀತ್ ಸಿಂಗ್ ಕೊಹ್ಲಿ ಅವರನ್ನು ಬೆದರಿಸಿ ಹಣದ ಕೌಂಟರ್ ಬಳಿ ನೂಕಿ ಹಲ್ಲೆ ನಡೆಸಿದ್ದಾರೆ. ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ ಎಂದು ಮಾಲೀಕ ಎಚ್ಚರಿಸಿದ್ದಕ್ಕೆ ಕುಪಿತರಾದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗುರ್ಮೀತ್ ಸಿಂಗ್ ಅವರ ಮೈಮೇಲೆ ಮೂರಕ್ಕೂ ಹೆಚ್ಚು ಕಡಿತದ ಗಾಯಗಳಾಗಿವೆ.
ಇದೇ ವೇಳೆ ಅಂಗಡಿಯ ಮೇಲಿನ ಮಹಡಿಯಲ್ಲಿ ವಾಸವಿರುವ ಮಾಲೀಕರ ಪತ್ನಿ ಅನಿರೀಕ್ಷಿತವಾಗಿ ಒಳಗೆ ಬಂದಿದ್ದರಿಂದ ಬೆಚ್ಟಿಬಿದ್ದ ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಗಾಯಗೊಂಡಿದ್ದರೂ ಲೆಕ್ಕಿಸದ ಮಾಲೀಕ ಗುರ್ಮೀತ್ ಸಿಂಗ್ ಕುರ್ಚಿಯನ್ನು ಕೈಗೆತ್ತಿಕೊಂಡು ದರೋಡೆಕೋರರ ಹಿಂದೆ ಬೆನ್ನಟ್ಟಿದ್ದಾರೆ. ಹೊರಗೆ ಬೈಕ್ ಸ್ಟಾರ್ಟ್ ಮಾಡಿ ಕಾಯುತ್ತಿದ್ದ ಮೂರನೇ ಸಹಚರನೊಂದಿಗೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ದರೋಡೆ ಯತ್ನ ಮತ್ತು ಹಲ್ಲೆ: ಪ್ಲಾಟಿನಾ ಬೈಕ್ನಲ್ಲಿ ಬಂದ ಮೂವರು ಮುಖಗವಸುಧಾರಿಗಳು ಅಂಗಡಿಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ.
ಧೈರ್ಯದ ಪ್ರತಿಕಾರ: ಸಿಸಿಟಿವಿ ಕಣ್ಣಾವಲು ಇದೆ ಎಂದಾಗ ಹಲ್ಲೆ ನಡೆಸಿದರೂ, ಮಾಲೀಕ ಗುರ್ಮೀತ್ ಸಿಂಗ್ ಕೊಹ್ಲಿ ಕುರ್ಚಿ ಹಿಡಿದು ದರೋಡೆಕೋರರನ್ನು ಬೀದಿಯವರೆಗೆ ಬೆನ್ನಟ್ಟಿದ್ದಾರೆ.
ಪೊಲೀಸ್ ನಿರ್ಲಕ್ಷ್ಯ ಆರೋಪ: ಘಟನೆಯ ತಕ್ಷಣ ತುರ್ತು ಸಹಾಯವಾಣಿ ‘112’ ಗೆ ಕರೆ ಮಾಡಿದರೂ ಯಾವುದೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ಮಾಲೀಕ ಆರೋಪಿಸಿದ್ದಾರೆ. ಮರುದಿನ ದಬಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಪೊಲೀಸರು ಸ್ಥಳ ಪರಿಶೀಲನೆಗೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯರ ಆತಂಕ: ಈ ಘಟನೆಯನ್ನು ಖಂಡಿಸಿರುವ ರಿಟೇಲ್ ಮೆಡಿಕಲ್ ಶಾಪ್ ಅಸೋಸಿಯೇಷನ್ ಅಧ್ಯಕ್ಷರು, ನಗರದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವರ್ವ್ಯಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತೀವ್ರ ಶೋಧ ನಡೆಸುತ್ತಿದ್ದಾರೆ.




