
ನವದೆಹಲಿ: ಭಾರತದಲ್ಲಿ ನವೆಂಬರ್ 21ರಿಂದ ಡಿಸೆಂಬರ್ 15ರವರೆಗೆ ನಡೆಯಲಿರುವ ಕೇವಲ 25 ದಿನಗಳ ಮದುವೆ ಸೀಸನ್ನಲ್ಲಿ ದೇಶಾದ್ಯಂತ ಸುಮಾರು 52 ಲಕ್ಷ ವಿವಾಹಗಳು ನೆರವೇರಲಿವೆ ಎಂದು ವರ್ತಕರ ಪ್ರಮುಖ ಸಂಘಟನೆಯಾದ ‘CAIT’ ವರದಿ ಮಾಡಿದೆ.
ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಅಧಿಕ ಮದುವೆಗಳು ನಡೆಯಲಿದ್ದು, ಈ ಅವಧಿಯಲ್ಲಿ ಬರೋಬ್ಬರಿ 7.5 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ವ್ಯಾಪಾರ-ವಹಿವಾಟು ನಡೆಯುವ ನಿರೀಕ್ಷೆಯಿದೆ. ರಾಷ್ಟ್ರ ರಾಜಧಾನಿ ದೆಹಲಿ-ಎನ್ಸಿಆರ್ ಒಂದರಲ್ಲೇ ಸುಮಾರು 5 ಲಕ್ಷ ಮದುವೆಗಳು ನಡೆಯಲಿದ್ದು, 2.5 ಲಕ್ಷ ಕೋಟಿ ರೂ. ವಹಿವಾಟು ನಿರೀಕ್ಷಿಸಲಾಗಿದೆ.
CAIT ಸಂಶೋಧನಾ ವಿಭಾಗವು 25 ರಾಜ್ಯಗಳ 300ಕ್ಕೂ ಹೆಚ್ಚು ವ್ಯಾಪಾರಿ ನಾಯಕರು ಹಾಗೂ 550ಕ್ಕೂ ಅಧಿಕ ವ್ಯಾಪಾರ ಸಂಘಟನೆಗಳ ಜತೆ ಸಮಾಲೋಚನೆ ನಡೆಸಿ ಈ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದೆ. ಒಟ್ಟು ಅಂದಾಜು ವ್ಯಾಪಾರದಲ್ಲಿ ಶೇ. 54ರಷ್ಟು ಅಂದರೆ ಸುಮಾರು 4.05 ಲಕ್ಷ ಕೋಟಿ ರೂ. ಸರಕುಗಳು ಮತ್ತು ಚಿಲ್ಲರೆ ಖರೀದಿಯಿಂದ ಹಾಗೂ ಶೇ. 46ರಷ್ಟು ಅಂದರೆ 3.45 ಲಕ್ಷ ಕೋಟಿ ರೂ. ವಿವಿಧ ಸೇವೆಗಳಿಂದ (Services) ಬರುವ ನಿರೀಕ್ಷೆಯಿದೆ.
ವಸ್ತುಗಳ ಮಾರಾಟ ಮತ್ತು ಆಭರಣ ಖರೀದಿ: ಮದುವೆ ಸೀಸನ್ನಲ್ಲಿ ಆಭರಣ ಮತ್ತು ಅಮೂಲ್ಯ ಲೋಹಗಳ ಖರೀದಿಯೇ ಅಗ್ರಸ್ಥಾನದಲ್ಲಿದ್ದು 1.2 ಲಕ್ಷ ಕೋಟಿ ರೂ., ಬಟ್ಟೆ ಹಾಗೂ ಉಡುಪುಗಳ ಮಾರಾಟ 90,000 ಕೋಟಿ ರೂ., ಗಿಫ್ಟ್ ಹಾಗೂ ಮದುವೆ ಪರಿಕರಗಳು, ದಿನಸಿ ಹಾಗೂ ಆಹಾರ ಪದಾರ್ಥಗಳು ತಲಾ 37,500 ಕೋಟಿ ರೂ. ವ್ಯಾಪಾರ ದಾಖಲಿಸುವ ನಿರೀಕ್ಷೆಯಿದೆ.
ಸೇವಾ ವಲಯದ ಕೊಡುಗೆ: ಮದುವೆ ಸೇವೆಯಲ್ಲಿ ಅಡುಗೆ (Catering) ಕ್ಷೇತ್ರದಿಂದ 75,000 ಕೋಟಿ ರೂ., ಮದುವೆ ಮಂಟಪಗಳು, ಬ್ಯಾಂಕ್ವೆಟ್ ಹಾಲ್ಗಳು ಹಾಗೂ ಹೋಟೆಲ್ಗಳಿಂದ 60,000 ಕೋಟಿ ರೂ., ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಅಲಂಕಾರಿಕ ಸೇವೆಗಳಿಂದ ತಲಾ 37,500 ಕೋಟಿ ರೂ. ವಹಿವಾಟು ನಿರೀಕ್ಷಿಸಲಾಗಿದೆ.
ಉದ್ಯೋಗಾವಕಾಶಗಳ ಸೃಷ್ಟಿ: ಅಡುಗೆ, ಅಲಂಕಾರ, ಫೋಟೋಗ್ರಫಿ, ಆತಿಥ್ಯ, ಸಾರಿಗೆ ಮತ್ತು ಸೌಂದರ್ಯವರ್ಧಕ ಸೇನೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1.25 ಕೋಟಿ ತಾತ್ಕಾಲಿಕ ಹಾಗೂ ಕಾಲೋಚಿತ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ದೇಶೀಯ ಉತ್ಪನ್ನಗಳಿಗೆ ಆದ್ಯತೆ: CAIT ವರದಿಯ ಪ್ರಕಾರ, ಸರಾಸರಿ ಮದುವೆ ಖರ್ಚು 4-5 ಲಕ್ಷ ರೂ.ಗಳಿಂದ ಹಿಡಿದು ಐಷಾರಾಮಿ ಮದುವೆಗಳಿಗೆ 4-5 ಕೋಟಿ ರೂ.ಗಳವರೆಗೆ ಇರಲಿದೆ. ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವಂತೆ ವರ್ತಕರ ಸಂಘಟನೆ ಮನವಿ ಮಾಡಿದೆ.




