SUDDIKSHANA KANNADA NEWS/ DAVANAGERE/ DATE:20-03-2024
ದಾವಣಗೆರೆ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ಪತ್ತೆಯಾಗಿದ್ದು, ಸುಮಾರು 46 ಕ್ವಿಂಟಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ಕಳೆದ ಮಾರ್ಚ್ 16ರಂದು ರಾತ್ರಿ ಸಮಯದಲ್ಲಿ ಹರಿಹರದಿಂದ ದಾವಣಗೆರೆ ಕಡೆಗೆ ಮಹೀಂದ್ರಾ ಬುಲೇರೋ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿರುತ್ತಿರುವ ಬಗ್ಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಕೂಡಲೇ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಅವರು ನೇತೃತ್ವದಲ್ಲಿ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಿ ದಾಳಿಗೆ ಸೂಚಿಸಿದರು.
ಅದರಂತೆ ಈ ಈ ತಂಡವು ದೊಡ್ಡಬಾತಿ ಗ್ರಾಮದ ಹತ್ತಿರ ಕೆಎ-17-ಎಎ-5831 ನೇ ಮಹೀಂದ್ರಾ ಬುಲೇರೋ ವಾಹನವನ್ನು ತಡೆದಾಗ ವಾಹನದ ಚಾಲಕ ಪೊಲೀಸರನ್ನು ನೋಡಿ ಓಡಿಹೋಗಿದ್ದ. ನಂತರ ವಾಹನ ಪರಿಶೀಲಿಸಿ ನೋಡಿದಾಗ ವಾಹನದಲ್ಲಿ ಆಹಾರ ಇಲಾಖೆಯಿಂದ ಸರಬರಾಜು ಆಗಿರುವ ಅಕ್ಕಿ ತುಂಬಿಕೊಂಡು ಹೋಗುತ್ತಿರುವುದು ಕಂಡುಬಂದಿದ್ದರಿಂದ ವಾಹನ ವಶಕ್ಕೆ ಪಡಿಸಿಕೊಳ್ಳಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರುಪಡಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಈ ಅಕ್ಕಿ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಆಹಾರ ನಿರೀಕ್ಷಕರು, ದಾವಣಗೆರೆ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅದರಂತೆ ಮಂಗಳವಾರದಂದು ಆಹಾರ ನಿರೀಕ್ಷಕರಾದ ನಾಗೇಂದ್ರ ಜೆ. ಅವರು ಠಾಣೆಗೆ ಬಂದು ಠಾಣಾ ಆವರಣದಲ್ಲಿದ್ದ ಕೆಎ-17-ಎಎ-5831 ನೇ ಮಹೀಂದ್ರಾ ಬುಲೇರೋ ವಾಹನ ಪರಿಶೀಲಿಸಿ ನೋಡಿದಾಗ ಈ ಬಾಡಿಯ ಒಳಗೆ ಗೋಣಿ ಚೀಲಗಳಲ್ಲಿ ಅಕ್ಕಿಯನ್ನು ಲೋಡ್ ಮಾಡಲಾಗಿತ್ತು.
ಈ ಚೀಲಗಳ ಮೇಲೆ ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಅಂತ ಲೇಬಲ್ ಇರುವ ಸುಮಾರು 46 ಕ್ವಿಂಟಾಲ್ 30 ಕೆ ಜಿ ಪಡಿತರ ಅಕ್ಕಿ ಇದ್ದು. ಈ ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ವಿತರಣೆ ಮಾಡುವ ಅಕ್ಕಿಯ ಹೋಲಿಕೆಯಂತೆ ಮೇಲ್ನೋಟಕ್ಕೆ ಕಂಡುಬಂದಿದೆ.
ಆದ್ದರಿಂದ ಮಹೀಂದ್ರಾ ಬುಲೇರೋ ವಾಹನದ ಚಾಲಕ ಹಾಗೂ ಮಾಲೀಕರ ಅಕ್ಕಿಯ ಸಾಗಾಟ ಮಾಡಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ- 1955 ರ ರೀತ್ಯಾ ಮುಂದಿನ ಕ್ರಮ ಕಾನೂನು ಕ್ರಮ ಕೈಗೊಳ್ಳಲು ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿಯಲ್ಲಿ ಭಾಗವಹಿಸಿದ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ್ ಸಿದ್ದನ ಗೌಡ್ರು, ಡಿಸಿಆರ್ ಬಿ ಸಿಬ್ಬಂದಿಯಾದ ಮಜೀದ್ ಕೆ.ಸಿ, ರಮೇಶ್ ನಾಯ್ಕ್, ರಾಘವೇಂದ್ರ, ಬಾಲಾಜಿ, ಆಂಜನೇಯ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಪ್ರಶಂಸಿಸಿದ್ದಾರೆ.