SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ 2024ರ ಲೋಕಸಭಾ ಚುನಾವಣೆಗೆ ದಾವಣಗೆರೆಯಿಂದ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಬಿಜೆಪಿಯ ಮೂಲತತ್ವದ ವಿರುದ್ಧವಾಗಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ ಎಂದು ಆರೋಪಿಸಿ ಭಿನ್ನಮತೀಯರು ಸಭೆ ನಡೆಸಲು ನಿರ್ಧರಿಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಯನ್ನು ಪ್ರತಿಭಟಿಸಿ, ಮುಂದಿನ ನಿರ್ಧಾರದ ಕುರಿತು ಚರ್ಚಿಸಲು ಮಾಜಿ ಸಚಿವ, ಬಿಜೆಪಿ ಕಟ್ಟಿ ಬೆಳೆಸಿದ ಎಸ್. ಎ. ರವೀಂದ್ರನಾಥ್ ಅವರ ನಿವಾಸದಲ್ಲಿ ಸಭೆ ಸೇರಲಿರುವ ಮುಖಂಡರು ಮುಂದಿನ ನಿರ್ಧಾರ ಕುರಿತಂತೆ ಚರ್ಚೆ ನಡೆಸಲಿದ್ದಾರೆ.
ಶಿರಮಗೊಂಡನಹಳ್ಳಿಯ ಎಸ್. ಎ. ರವೀಂದ್ರನಾಥ್ ನಿವಾಸದಲ್ಲಿ ಸಭೆಯು ಮಾರ್ಚ್ 14ರ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಬಿಜೆಪಿ ಪಕ್ಷನಿಷ್ಠಾವಂತರ ಸಭೆ ಕರೆಯಲಾಗಿದ್ದು, ಪಕ್ಷದ ಸರ್ವ ಕಾರ್ಯಕರ್ತರಿಗೂ ಸ್ವಾಗತ ಎಂದು ಕೋರಲಾಗಿದೆ.
ಸಭೆಯಲ್ಲಿ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಆರೈಕೆ ಆಸ್ಪತ್ರೆಯ ಡಾ. ರವಿಕುಮಾರ್, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದ್ರೆ, ಇನ್ನೂ ಯಾರ್ಯಾರು ಭಾಗವಹಿಸುತ್ತಾರೆ ಎಂಬುದು ಗೊತ್ತಾಗಿಲ್ಲ.
ಏನೀ ಬೇಡಿಕೆ…?
ಮುಂಬರುವ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಾಗ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದ ರೇಣುಕಾಚಾರ್ಯ ಅಂಡ್ ಟೀಂ ಮನವಿಗೆ ಬೆಲೆ ಸಿಕ್ಕಿಲ್ಲ. ಸಿದ್ದೇಶ್ವರ ಅವರಿಗೆ ಬಿಟ್ಟು ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು. ದೆಹಲಿಗೂ ಹೋಗಿ ಬಂದಿದ್ದರು. ಆದ್ರೆ, ಜಿ. ಎಂ. ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿರುವುದು ಮತ್ತೆ ಸಿಟ್ಟಿಗೆ ಕಾರಣವಾಗಿದೆ.
ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಹೈಕಮಾಂಡ್ ವರಿಷ್ಠರು ಅಭಿಪ್ರಾಯ ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದ ರೇಣುಕಾಚಾರ್ಯ ಅವರು ಈಗ ಬಹಿರಂಗವಾಗಿಯೇ ಬುಸುಗುಡುತ್ತಿದ್ದಾರೆ.
ಬಿಜೆಪಿ ರಾಜಕೀಯ ಪಕ್ಷ. ನಾವೆಲ್ಲರೂ ಒಮ್ಮತದಿಂದ ತೀರ್ಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆವು. ಆದ್ರೆ, ಪುರಸ್ಕರಿಸಿಲ್ಲ. ಸಿದ್ದೇಶ್ವರರ ಮನೆತನಕ್ಕೆ ಟಿಕೆಟ್ ನೀಡಿರುವುದು ರೇಣುಕಾಚಾರ್ಯ ಬಣ ರಣ ರಣ ಎನ್ನತೊಡಗಿದೆ.
ಜಿಲ್ಲೆಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಹೇಳಿದ್ದರೂ ಪರಿಗಣಿಸಿಲ್ಲ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಆರ್ ಎಸ್ ಎಸ್ ನ ಸಂಘಟನೆಯ ಪ್ರಮುಖರು, ದಾವಣಗೆರೆ ಜಿಲ್ಲಾ ಉಸ್ತುವಾರಿ, ಇಲ್ಲಿಗೆ ಬಂದಿದ್ದ ವೀಕ್ಷಕರು, ದೆಹಲಿಯ ಪ್ರಮುಖರನ್ನು ಭೇಟಿ ಮಾಡಿ ಬಂದಿದ್ದೆವು. ಅಭಿಪ್ರಾಯ ಹೇಳಿದ್ದರೂ ಪರಿಗಣನೆಗೆ ತೆಗೆದುಕೊಳ್ಳದಿರುವುದು ಬೇಸರ ತರಿಸಿದೆ ಎನ್ನುತ್ತಿದ್ದಾರೆ.
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸಭೆ ಕರೆದಿದ್ದು, ಈ ಬಾರಿಯ ಚುನಾವಣಾ ಕಣ ರಂಗೇರುತ್ತದೆ. ಪಕ್ಷೇತರ ಅಭ್ಯರ್ಥಿಯಾಗಿ ಯಾರಾದರೂ ಸ್ಪರ್ಧಿಸುತ್ತಾರಾ, ಚುನಾವಣಾ ಪ್ರಚಾರದಿಂದ ದೂರ ಉಳಿಯುತ್ತಾರಾ? ಯಡಿಯೂರಪ್ಪ ಅವರು ಮತ್ತೆ ಎಲ್ಲರನ್ನೂ ಕರೆಯಿಸಿ ಸಮಾಧಾನ ಪಡಿಸುತ್ತಾರಾ? ಸಭೆಯಲ್ಲಿ ಏನೆಲ್ಲಾ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.