SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ಸಿಎಂ ಸಿದ್ದರಾಮಯ್ಯರು ಇನ್ನೂ ಹತ್ತು ವರ್ಷ ರಾಜಕಾರಣದಲ್ಲಿರುತ್ತಾರೆ. ಅಧಿಕಾರದಲ್ಲಿ ಇದ್ದವರ ಬಳಿಗೆ ಎಲ್ಲರೂ ಹೋಗುತ್ತಾರೆ. ಅಧಿಕಾರ ಇಲ್ಲದಾಗ ಮನ್ನಣೆ ನೀಡುವುದಿಲ್ಲ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್. ಎಂ. ಕೃಷ್ಣ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗ ಎಲ್ಲರೂ ಗೌರವ ನೀಡುತ್ತಾರೆ. ಅವರ ಬಳಿಗೆ ಹೋಗುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೆ ಮೊದಲು ನೀಡುತ್ತಿದ್ದ ಮನ್ನಣೆ ನೀಡುವುದಿಲ್ಲ. ವರ್ಷ ಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯರು ಇನ್ನೂ ಒಂದು ದಶಕದವರೆಗೆ ರಾಜಕೀಯದಲ್ಲಿ ಇರುತ್ತಾರೆ. ಅವರ ಜೊತೆಗೆ ಅಹಿಂದ ವರ್ಗ ನಿಂತಿದೆ. ಅವರ ನಂತರ ಮುಂದೆ ಯಾರು ಎಂಬ ಪ್ರಶ್ನೆ ಈಗಲೇ ಕಾಡಲಾರಂಭಿಸಿದೆ. ಆದರೆ ಇದಕ್ಕೆ ಪರ್ಯಾಯ ಬೇಕಲ್ಲವೇ ಎಂದು ಪ್ರಶ್ನಿಸಿದರು.
ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದ್ದ ಬಸವಪ್ರಭು ಸ್ವಾಮೀಜಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದರಿಂದ ನಾನು ಪ್ರತಿಕ್ರಿಯೆ ನೀಡಿದ್ದೆ. ಯಾರ ಸ್ವಾಭಿಮಾನಕ್ಕೆ ಧಕ್ಕೆಯಾದರೂ ಸ್ವಾಭಿಮಾನಿ ಬಳಗ ಅವರ ಪರವಾಗಿ ನಿಲ್ಲಲಿದೆ. ಹೋರಾಟ ಮಾಡಲಿದೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.