SUDDIKSHANA KANNADA NEWS/ DAVANAGERE/ DATE:03-12-2024
ದಾವಣಗೆರೆ: ವೀರಶೈವ ಲಿಂಗಾಯತ ಮಹಾಸಭಾ ಕೇವಲ ಭೀಮಣ್ಣ ಖಂಡ್ರೆ, ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪನವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದು, ಮಹಾಸಭೆಯಿಂದ ವೀರಶೈವ ಲಿಂಗಾಯಿತ ಸಮಾಜಕ್ಕೆ ಯಾವುದೇ ಕೊಡುಗೆಯಿಲ್ಲ ಎಂದು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ದಾವಣಗೆರೆ ತಾಲ್ಲೂಕು ವೀರಶೈವ ಮಹಾಸಭಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ತಾಲ್ಲೂಕು ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ ಪ್ರಕಟಣೆಯಲ್ಲಿ ಹೇಳಿಕೆ ನೀಡಿದ್ದು, ಮಹಾಸಭಾವನ್ನು ಇತ್ತೀಚಿನ ದಿನಗಳಲ್ಲಿ ಖಂಡ್ರೆಯವರು ಹಾಗೂ ಶಾಮನೂರು ಶಿವಶಂಕರಪ್ಪನವರು ಸಂಘಟನೆಯನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ನಮ್ಮ ಸಮಾಜದ ಕಟ್ಟ ಕಡೆಯವ್ಯಕ್ತಿಗೂ ಯಾವುದೇ ತೊಂದರೆಯಾದರೂ ಮಹಾಸಭಾ ಬೆಂಬಲವಾಗಿ ನಿಲ್ಲುತ್ತಾ ಬಂದಿದೆ. ಶಾಮನೂರು ಶಿವಶಂಕರಪ್ಪನವರು ಸಮಾಜದ ವಿಷಯ ಬಂದಾಗ ತಮ್ಮ ಪಕ್ಷದ ನೇತೃತ್ವದ ಸರ್ಕಾರವಿದ್ದರೂ ಲೆಕ್ಕಿಸದೇ ಸಮಾಜ ಒಡೆದು ಹೋಗುವುದನ್ನು ಕಟುವಾಗಿ ವಿರೋಧಿಸಿ ಸಮಾಜದ ಮೇಲಿನ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಖಂಡ್ರೆ ಮತ್ತು ಯಡಿಯೂರಪ್ಪನವರು ತಮ್ಮ ಬೇಷರತ್ ಬೆಂಬಲ ನೀಡಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ದರೂ ವೀರಶೈವ ಮಹಾಸಭೆ ಹಾಗೂ ಹಿರಿಯ ನಾಯಕರುಗಳ ಬಗ್ಗೆ ಲಘುವಾಗಿ ಮಾತನಾಡಿ ಬಿಟ್ಟಿ ಪ್ರಚಾರ ಪಡೆಯಲು ಪ್ರಯತ್ನಿಸುತಿರುವ ಯತ್ನಾಳ್ ಅವರು ತಾವು ವೀರಶೈವ ಲಿಂಗಾಯಿತ ಸಮಾಜದ ಒಳಿತಿಗಾಗಿ ಏನು ಕೆಲಸ ಮಾಡಿದ್ದಾರೆ? ಸಮಾಜಕ್ಕೆ ಅವರ ಕೊಡುಗೆ ಏನು? ಎಂಬುದನ್ನು ಮೊದಲು
ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಪಂಚಮಸಾಲಿ ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಅಂತಿಮ ಹಂತದಲ್ಲಿದ್ದಾಗ ಅಮಿತ್ ಶಾರವರ ಆದೇಶದ ಮೇರೆಗೆ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾಗಬಾರದು ಎಂದು ಹೋರಾಟದ ದಿಕ್ಕು ತಪ್ಪಿಸಿದ ಸ್ವಾರ್ಥಿ ಬಸವನಗೌಡ ಪಾಟೀಲ್ ಯತ್ನಾಳ್ ಇನ್ನೊಮ್ಮೆ ನಮ್ಮ ಸಮಾಜದ ಹಿರಿಯ ಪ್ರಶ್ನಾತೀತ ಹಾಗೂ ಮುತ್ಸದ್ದಿ ನಾಯಕರಾದ ಡಾ. ಶಾಮನೂರು ಶಿವಶಂಕರಪ್ಪನವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು ಎಂದಿದ್ದಾರೆ.