ಮೈಸೂರು: ನಗರದ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡಲು ಪಾಲಿಕೆ ಮುಂದಾಗಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿ ಹಲವರು ಇದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ, ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದು, ಇದೀಗ ಪ್ರತಾಪ್ ಸಿಂಹಗೆ ಹಾಲಿ ಸಂಸದರಾದ ಯದುವೀರ್ ಒಡೆಯರ್ ಟಾಂಗ್ ಕೊಟ್ಟಿದ್ದಾರೆ.
ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯದುವೀರ್ ಒಡೆಯರ್, ಸಂಸದನಾದ ಬಳಿಕ ರಾಜ ಮನೆತನ ಹೆಚ್ಚು ಟಾರ್ಗೆಟ್ ಆಗುತ್ತಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಹೆಸರಿಡಲಿ ಎಂದ ಪ್ರತಾಪ್ ಸಿಂಹಗೂ ಯದುವೀರ್ ಒಡೆಯರ್ ಟಾಂಗ್ ಕೊಟ್ಟಿದ್ದು, ಪ್ರತಾಪ್ ಸಿಂಹ ಇತಿಹಾಸ ಮರೆತಿದ್ದಾರೆ ಅನ್ನಿಸುತ್ತೆ. ನಾನು ಇತಿಹಾಸ ಹೇಳಿದ ಮೇಲೆ ಮತ್ತೆ ನೆನಪಾಗಬಹುದು ಎಂದು ಹೇಳಿದರು.
ಹಿಂದಿನಿಂದಲೂ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ, ಕೆ ಆರ್ ಎಸ್ ರಸ್ತೆ ಎಂದು ಕರೆಯುತ್ತಾರೆ. ರಾಜಕುಮಾರಿ ಕೃಷ್ಣರಾಜಮ್ಮಣ್ಣಿ ಹಾಗೂ ಅವರ ಮಕ್ಕಳು ಟಿಬಿಯಿಂದ ಮೃತರಾಗುತ್ತಾರೆ. ಈ ರೀತಿ ಯಾರಿಗೂ ಆಗಬಾರದು ಅಂತ ನಾಲ್ವಡಿ ಕೃಷ್ಣರಾಜ ಒಡೆಯರ್, ತಂಗಿ ನೆನೆಪಿಗೆ ಅಲ್ಲಿ ಟಿಬಿ ಆಸ್ಪತ್ರೆ ಕಟ್ಟಿಸುತ್ತಾರೆ. ಅದಕ್ಕೆ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ ಅಥವಾ ರಾಜಕುಮಾರಿ ರಸ್ತೆ, ಕೆ ಆರ್ ಎಸ್ ರಸ್ತೆ ಎಂದು ಕರೆಯುತ್ತಾರೆ ಎಂದು ಯದುವೀರ್ ಒಡೆಯರ್ ವಿವರಿಸಿದ್ದಾರೆ.
ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡಲು ಪಾಲಿಕೆ ತೀರ್ಮಾನ ಮಾಡಿದೆ. ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ಆಗಿಲ್ಲ. ಯಾರೂ ಜನಪ್ರತಿನಿಧಿಗಳಿಲ್ಲ, ಈಗ ರೀತಿ ತೀರ್ಮಾನ ಸರಿಯಲ್ಲ. ಮೈಸೂರಿನಲ್ಲಿ ಸಾಕಷ್ಟು ರಸ್ತೆಗಳಿವೆ ಅಲ್ಲಿ ಯಾವುದಕ್ಕಾದರೂ ಸಿದ್ದರಾಮಯ್ಯ ಹೆಸರಿಡಲಿ. ಇದೇ ವಿಚಾರಕ್ಕೆ ಹಿಂದಿನಿಂದಲೂ ಸಾಕಷ್ಟು ಜನರು ಹೋರಾಟ ಮಾಡುತ್ತಿದ್ದಾರೆ. ಈಗ ಪಾಲಿಕೆಗೆ ಸಾಕಷ್ಟು ಜನ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು