SUDDIKSHANA KANNADA NEWS/ DAVANAGERE/ DATE:09-02-2024
ದಾವಣಗೆರೆ: ಸ್ವಲ್ಪ ಯಾಮಾರಿದ್ದರೂ ಅಪಾಯ ಆಗುತಿತ್ತು. ರೈಲ್ವೆ ಇಲಾಖೆಯ ಸಿಬ್ಬಂದಿ ಪರಿಶೀಲನೆಯಿಂದ ದುರಂತವೊಂದು ತಪ್ಪಿದ ಘಟನೆ ನಡೆದಿದೆ. ಹೌದು. ಇಂಥದ್ದೊಂದು ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ರೈಲ್ವೆ ಹಳಿಯ ಕ್ಲಾಂಪ್ ಗಳನ್ನು ಕಳ್ಳತನ ಮಾಡಿದ್ದ ಆರು ಆರೋಪಿಗಳನ್ನು ರೈಲ್ವೆ ಇಲಾಖೆಯ ಪೊಲೀಸರು ಬಂಧಿಸಿದ್ದಾರೆ. ನಗರದ ಶಾಸ್ತ್ರಿ ಲೇಔಟ್ ನ ಮಹಮ್ಮದ್ ಸಜ್ಜದ್ (23), ಎಂ. ಡಿ. ಸಾದತ್ (19), ಶಾಂತಿನಗರದ ಎ. ಮೊಹಮ್ಮದ್ ಗೌಸ್ (19), ರಜಾವುಲ್ಲಾ ಮುಸ್ತಫಾ ನಗರದ ಮೊಹಮ್ಮದ್ ಮುಬಾರಕ್ (19), ಮೊಹಮ್ಮದ್ ಹಸೇನ್ (20) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ರೈಲ್ವೆ ಇಲಾಖೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ಲಾಂಪ್ ಗಳನ್ನು ಕಳವು ಮಾಡಿರುವುದರ ಹಿಂದೆ ದುಷ್ಕೃತ್ಯ ಎಸಗುವ ಉದ್ದೇಶ ಇರುವ ಕುರಿತಂತೆ ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಗುಜರಿ ಅಂಗಡಿಗೆ ಕಬ್ಬಿಣ ಮಾರಾಟ ಮಾಡಿ ಹಣ ಗಳಿಸುವ ಉದ್ದೇಶದಿಂದ ಕಳವು ಮಾಡಿದ್ದು, ಕೆಲ ಆರೋಪಿಗಳಿಗೆ ಗುಜರಿ ನಂಟಿರುವ ಕುರಿತಂತೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಆರ್ ಪಿಎಫ್ ಇನ್ ಸ್ಪೆಕ್ಟರ್ ಬಿ. ಎನ್. ಕುಬೇರಪ್ಪ ಮಾರ್ಗದರ್ಶನದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಆರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ ಏನು…?
ಕಳೆದ ಫೆಬ್ರವರಿ 1 ರಂದು ರಾತ್ರಿ ರೈಲ್ವೆ ಹಳಿಯ ಕ್ಲಾಂಪ್ ಗಳು ಕಳವಾಗಿದ್ದವು. ದಾವಣಗೆರೆ – ತೋಳಹುಣಸೆ ರೈಲ್ವೆ ನಿಲ್ದಾಣದ ನಡುವೆ ಬರುವ ಎಸ್. ಎಸ್. ಹೈಟೆಕ್ ಆಸ್ಪತ್ರೆ ಬಳಿಯ ರೈಲ್ವೆ ಹಳಿಗಳಿಗೆ ಅಳವಡಿಕೆ ಮಾಡಲಾಗಿದ್ದ 178 ಕ್ಲಾಂಪ್ ಗಳನ್ನು ಸುತ್ತಿಗೆಯನ್ನು ಬಳಸಿ ಕಳ್ಳರು ಕದ್ದೊಯ್ದಿದ್ದರು. ಅಂದು ಬೆಳಿಗ್ಗೆ ರೈಲ್ವೆ ಇಲಾಖೆಯ ಸಿಬ್ಬಂದಿ ಬೆಳಿಗ್ಗೆ ಗಮನಿಸಿ ಎಚ್ಚೆತ್ತುಕೊಂಡಿದ್ದರಿಂದ ಆಗಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ.
ಕ್ಲಾಂಪ್ ಗಳನ್ನು ರೈಲ್ವೆ ಹಳಿಗಳ ಹಿಡಿತಕ್ಕೋಸ್ಕರ ಹಳಿಗಳ ಮಧ್ಯೆದಲ್ಲಿ ಒಂದೂವರೆ ಅಡಿಗೆ ಒದರಂತೆ ಅಳವಡಿಕೆ ಮಾಡಲಾಗುತ್ತದೆ. ಒಂದು ಕ್ಲಾಂಪ್ ಮುಕ್ಕಾಲು ಕೆ. ಜಿ. ತೂಕ ಬರುತ್ತದೆ. ಕಳವು ಮಾಡಿಕೊಂಡು ಹೋದ ಸಮಯದಿಂದ ಬೆಳಿಗ್ಗೆಯವರೆಗೆ ಸುಮಾರು ನಾಲ್ಕರಿಂದ ಐದು ರೈಲುಗಳು ಓಡಾಟ ನಡೆಸಿವೆ. ಒಂದು ಬಿಟ್ಟು ಮತ್ತೊಂದು ರೀತಿಯಲ್ಲಿ ಕ್ಲಾಂಪ್ ಗಳನ್ನು ಕಳ್ಳರು ಕಳ್ಳತನ ಮಾಡಿರುವುದರಿಂದ ಅಪಾಯ ಆಗಿಲ್ಲ. ಸರಣಿ ರೀತಿಯಲ್ಲಿ 170 ಕ್ಲಾಂಪ್ ಗಳನ್ನು ಬಿಚ್ಚಿಕೊಂಡು ಹೋಗಿದ್ದರೆ ರೈಲುಗಳ ವೇಗಕ್ಕೆ ಹಳಿಗಳು ತಡೆದುಕೊಳ್ಳದೇ ಅಪಘಾತ ಆಗುವ ಸಾಧ್ಯತೆ ಹೆಚ್ಚಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.