SUDDIKSHANA KANNADA NEWS/ DAVANAGERE/ DATE:07-03-2024
ದಾವಣಗೆರೆ: ಈ ಬಾರಿ ಬರಗಾಲ ತಲೆದೋರಿದೆ. ಭೀಕರ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದು, ರೈತರ ಸಂಕಷ್ಟ ಹೇಳತೀರದ್ದಾಗಿದೆ. ಆದ್ದರಿಂದ ರೈತರು ಏರೋಬಿಕ್ ರೈತರಾದರೆ ಕೈತುಂಬಾ ಹಣ ಸಂಪಾದನೆ ಮಾಡಬಹುದು ಎಂದು ಸಿರಿಗೆರೆಯ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಸಲಹೆ ನೀಡಿದರು.
ಅವರು ಹೊನ್ನಾಳಿ ತತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಈಶ್ವರ ದೇವಸ್ಥಾನದ ಧ್ವಜಾರೋಹಣ, ಕಾಳಿಕಾಂಬ ದೇವಿಯ ಪ್ರಾಣ ಪ್ರತಿಷ್ಠಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ರೈತರು ಒಂದೇ ಬೆಳೆ ಬೆಳೆದರೆ ಲಾಭವಾಗದು. ಕಾಲಕಾಲಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು. ಮಿಶ್ರ ಬೆಳೆ ಬೆಳೆದರೆ ಲಾಭ ಗಳಿಸಬಹುದು. ವೈಜ್ಞಾನಿಕ ರೀತಿಯಲ್ಲಿ ಬೆಳೆ ಬೆಳೆದರೆ ರೈತರು ಹೆಚ್ಚಿನ ಆದಾಯ ಗಳಿಸಬಹುದು. ಬಿಳಿ ಜೋಳ ಬೆಳೆಯುವತ್ತಲೂ ರೈತರು ಹೆಚ್ಚಾಗಿ ಬೆಳೆಯಬೇಕು. ನೀರಿನ ಲಭ್ಯತೆ ಕುರಿತಂತೆ ಮೊದಲೇ ಯೋಜನೆ ಹಾಕಿಕೊಳ್ಳಿ. ಬಿಳಿ ಜೋಳಕ್ಕೆ ನೀರಿನ ಅಂಶ ಕಡಿಮೆ ಇರುತ್ತದೆ. ಇಬ್ಬನಿಗೆ ಜೋಳ ಬರುತ್ತದೆ. ನಾನು ರೈತ ಸಂಘದ ಬಸವರಾಜಪ್ಪ ಭೇಟಿ ನೀಡಿ ವೀಕ್ಷಣೆ ಮಾಡಿದ್ದೇವೆ. ಇದರಿಂದ ಖರ್ಚು ಕಡಿಮೆ. ನೀರಿನ ಗ್ಯಾರಂಟಿಯನ್ನು ಆ ದೇವರೇ ನೀಡಬೇಕು ಎಂದು ಹೇಳಿದರು.
ಏತ ನೀರಾವರಿ ಯೋಜನೆಗೆ 850 ಕೋಟಿ ರೂಪಾಯಿ ಮಂಜೂರಾಗಿದ್ದು, ಕಾಮಗಾರಿ ಬಹುಪಾಲು ಮುಗಿಯುವ ಹಂತಕ್ಕೆ ಬಂದಿದೆ. ಮಂಜಣ್ಣರ ಜಮೀನಿನಲ್ಲಿ ಹಾದು ಹೋಗಬೇಕಾಗಿದ್ದ ಎಂಟತ್ತು ವಿದ್ಯುತ್ ಕಂಬಳ ಅಳವಡಿಕೆ ಬಾಕಿ ಇತ್ತು. ನ್ಯಾಯಾಲಯ ಮೆಟ್ಟಿಲು ಏರಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆದ್ರೆ, ಈಗ ಮಾತನಾಡಿ ಒಂದು ಹಂತಕ್ಕೆ ತಂದಿದ್ದೇವೆ. ಆದ್ದರಿಂದ ಕೋರ್ಟ್ ಕೂಡಾ ಇಂದೋ ಅಥವಾ ನಾಳೆ ನಿರ್ಧಾರ ಪ್ರಕಟಿಸಲಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಮಾತನಾಡಿ, ಬರಗಾಲ ತಲೆದೋರಿದ್ದು, ಎಲ್ಲರೂ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ರೈತರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕಾಗಿದೆ. ಕೆರೆ ನೀರು ಬತ್ತಿ ಹೋಗುತ್ತಿದೆ. ಜಲಾಶಯದಲ್ಲಿಯೂ ನೀರು ಸಂಗ್ರಹ ಕಡಿಮೆ ಇದೆ. ಹಾಗಾಗಿ, ಈ ವರ್ಷ ಒಳ್ಳೆಯ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಬರಗಾಲದಂಥ ಪರಿಸ್ಥಿತಿ ವೇಳೆ ಆ ದೇವರು ಕೂಡ ನಮ್ಮನ್ನು ಪರೀಕ್ಷಿಸುತ್ತಾನೆ. ಬರಗಾಲ ತಲೆದೋರಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆ ಉತ್ತಮವಾಗಿ ಸುರಿದರೆ ರೈತರ ಬದುಕು ಹಸನಾಗುತ್ತದೆ. ಎಲ್ಲರೂ ಆಶಾಭಾವ ಹೊಂದೋಣ. ಒಳ್ಳೆಯ ಮಳೆಯಾಗುತ್ತದೆ ಎಂಬ ವಿಶ್ವಾಸ ಇಡೋಣ ಎಂದು ಹೇಳಿದರು.
ಶಾಸಕ ಡಿ. ಜಿ. ಶಾಂತನಗೌಡ ಮಾತನಾಡಿ, ನನ್ನ ಮತ ಕ್ಷೇತ್ರದ ಯಕ್ಕನಹಳ್ಳಿ ಗ್ರಾಮದಲ್ಲಿ ನೂತನ ಶ್ರೀ ಈಶ್ವರ ದೇವಸ್ಥಾನದ ಕಳಸಾರೋಹಣ ಕಾಳಿಕಾಂಬ ದೇವಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಖುಷಿ ಕೊಟ್ಟಿದೆ. ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಗಳವರ ಆಶೀರ್ವಾದ ಪಡೆದು ಭಕ್ತಿ ಸಮರ್ಪಿಸಿದೆ ಎಂದು ತಿಳಿಸಿದರು.
ಇಡೀ ನಾಡಿಗೆ ಬರಗಾಲ ಬಂದಿದ್ದರೂ ಯಕ್ಕನಹಳ್ಳಿ ಗ್ರಾಮದಲ್ಲಿ ಬರಗಾಲ ಬಂದಿಲ್ಲ. ಇದೊಂದು ವಿಶಿಷ್ಟ ಗ್ರಾಮ ಆಗಿದೆ. ಇಲ್ಲಿನ ಯುವಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಜನರ ಒಗ್ಗಟ್ಟು ಮೆಚ್ಚುವಂಥದ್ದು ಎಂದು ತಿಳಿಸಿದರು.
ಸಾದು ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಮಾತನಾಡಿ, ನೀರಿನ ಕೊರತೆ ಎದುರಾದರೆ ಒಕ್ಕಲುತನ ಕಷ್ಟವಾಗುತ್ತದೆ. ರೈತರಿಗೆ ಉಚಿತ ವಿದ್ಯುತ್ ನೀಡಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಸದಾ ಸಿದ್ಧ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರ ಬಳಿ ಚರ್ಚಿಸಿರುವುದಾಗಿ ತಿಳಿಸಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಆಪ್ತ ಸಹಾಯಕ ದೇವರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ. ಪಂ. ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಎ. ಎಂ. ನಾಗರಾಜಪ್ಪ, ಕರಿಬಸಪ್ಪ, ಬಿಜೆಪಿ ಮುಖಂಡ ದೇವರಾಜ್, ಎಂ. ಪಿ. ರಾಜು, ಎಚ್. ಎ. ಗದ್ದಿಗೇಶ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮದ ಮಹಿಳೆಯರು ಸಿರಿಗೆರೆ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.