ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿರುವ ಮಸೀದಿಗಳಿಂದ ಧ್ವನಿವರ್ಧಕಗಳನ್ನು (Loudspeakers) ತಕ್ಷಣವೇ ತೆರವುಗೊಳಿಸುವಂತೆ ಸ್ಥಳೀಯ ಪೊಲೀಸರು ಮೌಖಿಕವಾಗಿ ಸೂಚನೆ ನೀಡುತ್ತಿದ್ದಾರೆ ಎನ್ನಲಾದ ವಿಚಾರವೀಗ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಪೊಲೀಸರ ಈ ಕ್ರಮ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಗಂಭೀರ ಪ್ರಹಾರ ಎಂದು ಆರೋಪಿಸಿರುವ ಮುಸ್ಲಿಂ ಧಾರ್ಮಿಕ ನಾಯಕರು ಹಾಗೂ ರಾಜಕೀಯ ಮುಖಂಡರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದ ಶಬ್ದ ಮಾಲಿನ್ಯ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಈ ನಿಯಮದಂತೆ ಹಗಲಿನಲ್ಲಿ 55 ಡೆಸಿಬಲ್ ಹಾಗೂ ರಾತ್ರಿ ವೇಳೆ 45 ಡೆಸಿಬಲ್ ಗರಿಷ್ಠ ಶಬ್ದಮಿತಿಯನ್ನು ನಿಗದಿಪಡಿಸಲಾಗಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸ್ಪಷ್ಟನೆ:
ಹೆಚ್ಚುತ್ತಿರುವ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಸರ್ಕಾರ ಯಾವುದೇ ಧರ್ಮದ ವಿರುದ್ಧವಾಗಿ ಕಾರ್ಯಾಚರಣೆ ನಡೆಸುತ್ತಿಲ್ಲ. ಕೇವಲ ಉಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಲಾಗುತ್ತಿದೆ. ಯಾವುದೇ ಧಾರ್ಮಿಕ ಪ್ರಾರ್ಥನಾ ಮಂದಿರದ ಶಬ್ದವು ಆವರಣದ ಒಳಗಡೆಯೇ ಇರಬೇಕು. ಈವರೆಗೆ ಒಟ್ಟು 5,299 ಧ್ವನಿವರ್ಧಕಗಳನ್ನು (4,203 ಮಸೀದಿ ಮತ್ತು 1,096 ದೇವಾಲಯಗಳಿಂದ) ಪೊಲೀಸರ ಸೂಚನೆಯಂತೆ ತೆರವುಗೊಳಿಸಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ ಹಾಗೂ ರಾಜಕೀಯ ಸಂಘರ್ಷ:
ಜಮೀಯತ್ ಉಲೇಮಾ-ಎ-ಹಿಂದ್ ಬೆಂಗಾಲ್ ಘಟಕದ ಅಧ್ಯಕ್ಷ ಸಿದ್ದಿಕುಲ್ಲಾ ಚೌಧರಿ ಮತ್ತು ಐಎಸ್‌ಎಫ್ ಶಾಸಕ ನೌಶಾದ್ ಸಿದ್ದಿಕಿ ಪೊಲೀಸರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಧಿಕೃತ ಲಿಖಿತ ಆದೇಶವಿಲ್ಲದೆ ಪೊಲೀಸರು ಧ್ವನಿವರ್ಧಕ ತೆರವುಗೊಳಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದು, ಹೈಕೋರ್ಟ್ ಮೆಟ್ಟಿಲೇರುವ ಸುಳಿವು ನೀಡಿದ್ದಾರೆ.
ಮತ್ತೊಂದೆಡೆ, ಆಡಳಿತಾರೂಢ ಬಿಜೆಪಿ ನಾಯಕರು ಈ ಆರೋಪಗಳನ್ನು ತಳ್ಳಿಹಾಕಿದ್ದು, ಕಾನೂನು ಪ್ರತಿಯೊಬ್ಬರಿಗೂ ಒಂದೇ ಎಂದು ತಿರುಗೇಟು ನೀಡಿದ್ದಾರೆ.





Leave a comment