ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರಲ್ಲಿ ಕೈಗೊಂಡ ವಿದೇಶ ಪ್ರವಾಸಗಳ ವೆಚ್ಚದ ವಿವರವನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಹಂಚಿಕೊಂಡಿದೆ. 2025ರಲ್ಲಿ ಒಟ್ಟು 23 ದೇಶಗಳಿಗೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದು, ಇದಕ್ಕೆ ಸುಮಾರು 187 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಂಸದರಾದ ಸಂಜಯ್ ಸಿಂಗ್ ಮತ್ತು ವಿ. ಶಿವದಾಸನ್ ಅವರು ಪ್ರಧಾನಿಯವರ ವಿದೇಶ ಪ್ರವಾಸ ವೆಚ್ಚ ಹಾಗೂ ಒಪ್ಪಂದಗಳ ಕುರಿತು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರೆಟಾ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಯಾವ ದೇಶದ ಪ್ರವಾಸಕ್ಕೆ ಎಷ್ಟು ಖರ್ಚು?
2025ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ಜಪಾನ್ ಸೇರಿದಂತೆ 23 ದೇಶಗಳಿಗೆ ಪ್ರಧಾನಿ ಭೇಟಿ ನೀಡಿದ್ದರು. ಅದರಲ್ಲಿ ಪ್ರಮುಖ ದೇಶಗಳ ಪ್ರವಾಸ ವೆಚ್ಚ:
ಫ್ರಾನ್ಸ್: ರೂ. 25.59 ಕೋಟಿ
ಬ್ರೆಜಿಲ್: ರೂ. 17.72 ಕೋಟಿ
ಅಮೆರಿಕ (USA): ರೂ. 16.54 ಕೋಟಿ
ಸೌದಿ ಅರೇಬಿಯಾ: ರೂ. 15.54 ಕೋಟಿ
ಚೀನಾ: ರೂ. 10.59 ಕೋಟಿ
ಬ್ರಿಟನ್ (UK): ರೂ. 9.91 ಕೋಟಿ
ಇದರ ಜೊತೆಗೆ ಕೆನಡಾ, ಥೈಲ್ಯಾಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಮಾಲ್ಡೀವ್ಸ್, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಪ್ರಧಾನಿ ಭೇಟಿ ನೀಡಿದ್ದರು.
2026ರ ವೆಚ್ಚ ಹಾಗೂ ಹಿಂದಿನ ವರ್ಷಗಳ ಅಂಕಿ-ಅಂಶಗಳು
2026ರಲ್ಲಿ (ಇಲ್ಲಿಯವರೆಗೆ): 2026ರ ಜುಲೈವರೆಗೆ ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸಗಳಿಗೆ 74.58 ಕೋಟಿ ರೂ. ಖರ್ಚಾಗಿದೆ (ಜುಲೈನಲ್ಲಿ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸ ಸೇರಿ).
2021 ರಿಂದ 2024ರವರೆಗೆ: ಒಟ್ಟು ಸುಮಾರು 295 ಕೋಟಿ ರೂ. ವೆಚ್ಚವಾಗಿತ್ತು.
2024: ರೂ. 109 ಕೋಟಿ (16 ದೇಶಗಳು)
2023: ರೂ. 93 ಕೋಟಿ
2022: ರೂ. 55.82 ಕೋಟಿ
2021: ರೂ. 36 ಕೋಟಿ (4 ದೇಶಗಳು)
316 ಒಪ್ಪಂದಗಳು, $381.8 ಬಿಲಿಯನ್ FDI
ಪ್ರಧಾನಿಯವರ ಉನ್ನತ ಮಟ್ಟದ ವಿದೇಶಿ ಭೇಟಿಗಳು ಜಾಗತಿಕ ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಗಟ್ಟಿಗೊಳಿಸಲು ಸಹಕಾರಿ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಸಹಿ ಮಾಡಿದ ಒಪ್ಪಂದಗಳು: ಜುಲೈ 2021ರಿಂದ ಪ್ರಧಾನಿ ಪ್ರವಾಸದ ವೇಳೆ ಒಟ್ಟು 316 ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಸಾಮರಸ್ಯ ಒಪ್ಪಂದಗಳಿಗೆ (MoU) ಸಹಿ ಹಾಕಲಾಗಿದೆ.
ವಿದೇಶಿ ನೇರ ಹೂಡಿಕೆ (FDI): ಏಪ್ರಿಲ್ 2021 ರಿಂದ ಡಿಸೆಂಬರ್ 2025 ರ ಅವಧಿಯಲ್ಲಿ ಭಾರತಕ್ಕೆ 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆ ಹರಿದುಬಂದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.





Leave a comment