SUDDIKSHANA KANNADA NEWS/ DAVANAGERE/ DATE:31-01-2024
ದಾವಣಗೆರೆ: ವಿಶ್ವ ಕ್ಯಾನ್ಸರ್ ದಿನವಾದ ಫೆಬ್ರವರಿ 4ರಂದು ಜಿಎಂ ಇನ್ ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸ್ ಅಂಡ್ ರಿಸರ್ಚ್ ಕಾಲೇಜು ಮತ್ತು ಜಿಎಂ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವಾಕಥಾನ್ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ ಶುರುವಾಗಲಿದೆ ಎಂದು ಜಿಎಂಐಪಿಎಸ್ ಆರ್ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಬೋಳಕಟ್ಟೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾವು ಜಿಲ್ಲಾಸ್ಪತ್ರೆಯಿಂದ ಆರಂಭಗೊಂಡು ಶಾಮನೂರು ರಸ್ತೆಯ ಮೂಲಕ ಸಾಗಿ ವಿದ್ಯಾರ್ಥಿಭವನ, ಹದಡಿ ರಸ್ತೆ, ಬಿ.ಆರ್. ಅಂಬೇಡ್ಕರ್ ವೃತ್ತ, ಜಯದೇವ ವೃತ್ತದಲ್ಲಿ ಜಮಾವಣೆಗೊಂಡು ಇಲ್ಲಿ ಕ್ಯಾನ್ಸರ್ ಕುರಿತು ಆರ್.ಟಿ. ಅರುಣ್ ಕುಮಾರ್, ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಅಷ್ಟೇ ಅಲ್ಲದೆ ಜಾಗೃತಿಯ ಜೊತೆ ಕ್ಯಾನ್ಸರ್ ರೋಗ ಚಿಹ್ನೆಗಳು, ರೋಗಲಕ್ಷಣಗಳು ಮತ್ತು ಅಪಾಯ ಸಂಭವನೀಯತೆಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ.ಎಂ.ಸಿದ್ರೇಶ್ವರ, ಜಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್. ಆರ್. ಶಂಕಪಾಲ್, ಸಹ ಉಪಕಲುಪತಿ ಡಾ.ಎಚ್.ಡಿ.ಮಹೇಶಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಎಸ್. ಷಣ್ಮುಖಪ್ಪ, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಗೋಪಾಲ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಸಂಜಯ್ ಪಾಂಡೆ, ಜಿ ಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಬೋಳಕಟ್ಟಿ ಮುಖ್ಯಸ್ಥರಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅರ್ಬುದ ಎಂದು ಕರೆಯಲ್ಪಡುವ ಕ್ಯಾನ್ಸರ್ ಕೋಶಗಳ ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿಸಿ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ ತೋರಿಸುವ ಪರಿಯನ್ನು, ಕ್ಯಾನ್ಸರ್ ರೋಗದ ವಿವಿಧ ವಿಧಗಳನ್ನು ಮತ್ತು ಅದರ ಚಿಕಿತ್ಸೆಯ ವ್ಯವಸ್ಥೆಯ ಜತೆ ರೋಗ ಸಂಬಂಧಿತ ಔಷಧೋಪಚಾರಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಅವರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ಜಿಎಂ ಫಾರ್ಮಸಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ನಾಟಕ ರೂಪದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆಯ ಉಪಯುಕ್ತ ಮಾಹಿತಿಗಳನ್ನು ಜನಸಾಮಾನ್ಯರ ಮುಂದೆ ಪ್ರದರ್ಶಿಸಲಿದ್ದಾರೆ. ಜನಜಾಗೃತಿ ಮೇಳದಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ಸಂಬಂಧಿತ ವಿವಿಧ ಅಂಶಗಳನ್ನು ಜಾಗೃತಿ ಫಲಕಗಳಲ್ಲಿ ಅಳವಡಿಸಿ ಜನರಲ್ಲಿ ಅರಿವನ್ನು ಮೂಡಿಸಲಿದ್ದಾರೆ. ತದನಂತರ ಜಾಗೃತಿ ಜಾಥಾವು ಹೈಸ್ಕೂಲ್ ಮೈದಾನವನ್ನು ತಲುಪಲಿದೆ ಎಂದರು.
ಗೋಷ್ಟಿಯಲ್ಲಿ ಜಿಎಂಐಟಿ ಕಾಲೇಜಿನ ಉದ್ಯೋಗ ಮತ್ತು ತರಬೇತಿ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟೀಮನಿ, ರಾಕೇಶ್, ಪ್ರತೀಕ್ಷಾ, ಮಹಮ್ಮದ್ ಯೂಸುಫ್, ಮಹಮ್ಮದ್ ಯಾಸೀಸ್ ಮತ್ತಿರರು ಹಾಜರಿದ್ದರು.