SUDDIKSHANA KANNADA NEWS/ DAVANAGERE/ DATE:14-02-2024
ದಾವಣಗೆರೆ (Davanagere): ಬಡವರು ಮಕ್ಕಳು ಬೆಳೀಬೇಕು ಎಂಬುದು ಸ್ಯಾಂಡಲ್ ವುಡ್ ಖ್ಯಾತ ನಟ ಡಾಲಿ ಧನಂಜಯ್ ಮಾತು ಸಖತ್ ಸದ್ದು ಮಾಡಿತ್ತು. ಈಗ ದಾವಣಗೆರೆ ಜಿಲ್ಲೆಯಾದ್ಯಂತ “ಬಡವರ ಮಕ್ಕಳು ರಾಜಕಾರಣದಲ್ಲಿ ಬೆಳೀಬೇಕಣ್ಣ, ವಿನಯಣ್ಣ ಎಂಪಿ ಆಗಬೇಕಣ್ಣ” ಎಂಬ ಘೋಷವಾಕ್ಯ ಮೊಳಗತೊಡಗಿದೆ.
ದಾವಣಗೆರೆ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸುವ ಮೂಲಕ ಮನೆ ಮನೆ ಮಾತಾಗಿರುವ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನ ಪ್ರಬಲ ಆಕಾಂಕ್ಷಿಯೂ ಆದ ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಪರ ಯುವಕರು, ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು, ಹಿರಿಯರು ಸೇರಿದಂತೆ ಎಲ್ಲಾ ವರ್ಗದವರು ವಿನಯ್ ಕುಮಾರ್ ಅವರು ಒಮ್ಮೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾಗಬೇಕು. ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆ, ಜನಸಾಮಾನ್ಯರಿಗೆ ಸ್ಪಂದಿಸುವ ರೀತಿಗೆ ಖುಷಿಯಾಗಿದೆ ಎನ್ನುತ್ತಾರೆ ಜನರು.
ಸಿಎಂ ಸಿದ್ದರಾಮಯ್ಯ, ಹೆಚ್. ಸಿ. ಮಹಾದೇವಪ್ಪ, ಕೆ. ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ, ಸಿರಿಗೆರೆ ಶ್ರೀಗಳು, ಸಾಣೇಹಳ್ಳಿ ಶ್ರೀಗಳು, ಹೊಸದುರ್ಗ ಕನಕ ಪೀಠದ ಗುರುಗಳು, ಬೆಳ್ಳೂಡಿಯ ಕನಕ ಮಠದ ಶ್ರೀಗಳು ಸೇರಿದಂತೆ ಎಲ್ಲಾ ವರ್ಗದವರೂ ವಿನಯ್ ಕುಮಾರ್ ಅವರ ಪಾದಯಾತ್ರೆ, ಬೆಂಗಳೂರು ಇನ್ಸೈಟ್ಸ್ ಐಎಎಸ್ ಸಂಸ್ಥೆ ಕಟ್ಟಿ ಬೆಳೆಸಿದ ಪರಿಗೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ.
ಸಾಧನೆ ಈಗ ಎಲ್ಲರ ಪ್ರಶಂಸೆಯ ಜೊತೆಗೆ ರಾಜಕಾರಣದಲ್ಲಿ ಹೆಚ್ಚಿನ ಬೆಳವಣಿಗೆ ಆಗಬೇಕು, ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು. ಇಂಥವರು ರಾಜಕಾರಣದಲ್ಲಿ ಮಿಂಚಬೇಕು ಎಂಬ ಮಾತುಗಳು ಈಗ ಹೆಚ್ಚು ಚರ್ಚಿತ ವಿಚಾರ.
ಪಾದಯಾತ್ರೆ ಕೈಗೊಂಡಿದ್ದು ಯಾಕೆ…?
ಪ್ರತಿಯೊಬ್ಬರಲ್ಲಿಯೂ ವಿನಯ್ ಕುಮಾರ್ ಅವರು ಪಾದಯಾತ್ರೆ ಕೈಗೊಂಡಿದ್ದು ಯಾಕೆ ಎಂಬ ಪ್ರಶ್ನೆ ಮೂಡಿತ್ತು. ಆದ್ರೆ, ಈಗ ಎಲ್ಲರಿಗೂ ಗೊತ್ತಾಗಿದೆ. ಕ್ಷೇತ್ರದ ಜನರಿಗೆ ಪರಿಚಯವಾಗುವ ಜೊತೆಗೆ ಜನರ ಸಂಕಷ್ಟ, ಸಮಸ್ಯೆ ಆಲಿಸುವ, ಜನರ ನೋವಿಗೆ ಧ್ವನಿಯಾಗುವ ಸಲುವಾಗಿ ಕೈಗೊಂಡಿದ್ದೇ ಪಾದಯಾತ್ರೆ.
ಮಾತ್ರವಲ್ಲ, ತನ್ನ ಪರಿಚಯ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಗೊತ್ತಾಗಬೇಕು ಎಂಬ ಉದ್ದೇಶ ಇಟ್ಟುಕೊಂಡು ನಡೆಸಿದ ಪಾದಯಾತ್ರೆ ಒಳ್ಳೆಯ ಹೆಸರು ತಂದುಕೊಡುವ ಜೊತೆಗೆ ಪಕ್ಷದ ವೇದಿಕೆಯಲ್ಲಿ ಎಲ್ಲರೂ ಗುರುತಿಸುವಂತಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಾಲ್ಮೀಕಿ ಪೀಠಕ್ಕೆ ಆಗಮಿಸಿದ್ದ ಸಚಿವ ಕೆ. ಎನ್. ರಾಜಣ್ಣ ಅವರೂ ಏನಪ್ಪಾ ವಿನಯ್ ಕುಮಾರ್, ನೀನು ಟಿಕೆಟ್ ಆಕಾಂಕ್ಷಿ, ಪಾದಯಾತ್ರೆ, ನಿಮ್ಮ ಸಂಸ್ಥೆಯ ಸಾಧನೆ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳುವ ಮೂಲಕ ವಿನಯ್ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಿಎಂ ಸಿದ್ದರಾಮಯ್ಯ ಸಂತಸ:
ಪಾದಯಾತ್ರೆ ನಡೆಸಿ ದಾವಣಗೆರೆ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಹಾಗೂ ಬೆಂಗಳೂರು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಮೂಲಕ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಖ್ಯಾತಿ ಗಳಿಸಿರುವ ವಿನಯ್ ಕುಮಾರ್ ಅವರ ಕಾರ್ಯವೈಖರಿಗೆ ಸಿಎಂ ಸಿದ್ದರಾಮಯ್ಯ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದಾಗ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಹಬ್ಬಾಸ್ ಗಿರಿಯನ್ನೂ ಕೊಟ್ಟಿದ್ದರೂ. ಪ್ರಶಂಸೆಯನ್ನೂ ನೀಡಿದ್ದರು.
ಇದೇ ರೀತಿಯಲ್ಲಿ ಜನರ ಬಳಿ ಹೋಗು ಜನಪ್ರತಿನಿಧಿಯಾಗುವೆ ಎಂದು ಹಾರೈಸಿದ್ದರು. ಸಚಿವ ಹೆಚ್. ಸಿ. ಮಹಾದೇವಪ್ಪ, ಭೈರತಿ ಸುರೇಶ್ ಅವರೂ ಮಾತುಕತೆ ನಡೆಸಿದ್ದರು. ವಿನಯ್ ಕುಮಾರ್ ಎಲ್ಲರ ಗಮನ ಸೆಳೆದಿದ್ದರು.
ವಿನಯ ನಡಿಗೆ ಹಳ್ಳಿಯ ಕಡೆಗೆ:
ಈ ಅಭಿಯಾನ ಸಾಕಷ್ಟು ಸದ್ದು ಮಾಡಿತ್ತು. ಈ ಕಾರ್ಯ ಕಾಂಗ್ರೆಸ್ ಅಷ್ಟೇ ಅಲ್ಲ, ಬಿಜೆಪಿಯವರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಯಿತು. ಹಳ್ಳಿ ಹಳ್ಳಿಗಳಲ್ಲಿಯೂ ವಿನಯ್ ಕುಮಾರ್ ಮನೆಮಾತಾದರು.
Read Also This Story: CONTROVERSY STORY: ಮುಖ್ಯಶಿಕ್ಷಕಿ ಮೇಲಿನ ದ್ವೇಷಕ್ಕೆ ಇಂಗ್ಲೀಷ್ ಟೀಚರ್ ಷಡ್ಯಂತ್ರ, ವಿದ್ಯಾರ್ಥಿನಿಯರಿಗೆ ಶೌಚ ಸ್ವಚ್ಛಗೊಳಿಸುವ ಶಿಕ್ಷೆ: ಕೆಟ್ಟದ್ದು ಮಾಡಲು ಹೋದ ಟೀಚರ್ ಗೆ ಮುಂದೇನಾಯ್ತು…?
ಜನರೊಟ್ಟಿಗೆ ಸಂವಾದ ನಡೆಸಿದರು. ಹಿರಿಯರ ಸಂಕಷ್ಟ ಆಲಿಸಿದರು, ಕಿರಿಯರ ಸಂಕಷ್ಟ ಅರಿತರು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ನೋವಿನ ಕಥೆ ಹೇಳಿದರು. ಮಹಿಳೆಯರ ಹೋರಾಟದ ಬದುಕು, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಂಡರು. ಕೆಲ ಗ್ರಾಮಗಳಲ್ಲಿನ ಸಮಸ್ಯೆಗಳ ಪಟ್ಟಿಯೇ ವಿನಯ್ ಕುಮಾರ್ ಅವರ ಬಳಿ ಬಂತು.
ಪರಿಹರಿಸುವ ಭರವಸೆ:
ಜನರ ಸಮಸ್ಯೆಗಳಿಗೆ ಧ್ವನಿಯಾಗುವ ದೃಷ್ಟಿಯಿಂದ, ಪಾದಯಾತ್ರೆಯ ಮೂಲಕ ಜನರ ಬಳಿ ತೆರಳಿ, ಸಮಸ್ಯೆಗಳನ್ನು ಆಲಿಸಿ, ಮುಂದೆ ಅಧಿಕಾರಕ್ಕೆ ಬಂದಾಗ ಆ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿ, ಜನರು ಮತ್ತು ಜನಪ್ರತಿನಿಧಿಗಳ ಮಧ್ಯೆ ಆರೋಗ್ಯಕರ ಬಾಂಧವ್ಯವನ್ನು ಬೆಳೆಸುವುದೇ ಈ ಪಾದಯಾತ್ರೆಯ ಮೂಲ ಉದ್ದೇಶ ಎಂಬ ಮಾತು ಹೇಳುತ್ತಿದ್ದ ವಿನಯ್ ಕುಮಾರ್ ಅವರು ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದವರು. ಎಲ್ಲಾ ರೀತಿಯ ನೋವು ಅನುಭವಿಸಿದವರು. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಹಠ ತೊಟ್ಟು ಐಎಎಸ್ ಸಂಸ್ಥೆ ಕಟ್ಟಿ ಯಶಸ್ವಿಯಾದವರು.
ಹಳ್ಳಿ ಮಕ್ಕಳು ದಿಲ್ಲಿಯಲ್ಲಿ ಹೆಸರು ವಾಸಿಯಾಗಬೇಕು:
ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದರೆ ದೆಹಲಿಯೇ ತಿರುಗಿ ನೋಡುವಂತ ಸಾಧನೆ ಮಾಡ್ತಾರೆ. ಹಾಗಾಗಿ, ಇವರಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುವ ಜೊತೆಗೆ ಅವರ ಭವಿಷ್ಯ ರೂಪಿಸುವ ಭರವಸೆ ನೀಡಿರುವ ವಿನಯ್ ಕುಮಾರ್ ಅವರು ಈಗಾಗಲೇ ಎಷ್ಟೋ ಶಾಲೆಗಳಿಗೆ ಸಹಾಯ ಮಾಡಿದ್ದಾರೆ.
ಪೀಠೋಪಕರಣ, ಪಠ್ಯಪುಸ್ತಕ, ಪೆನ್, ಶೂ, ಸಹಾಯಧನ ಸೇರಿದಂತೆ ಸಾಕಷ್ಟು ನೆರವು ನೀಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಈಗಲೇ ಮನೆ ಮುಂದೆ ಹಾಗೂ ವಿನಯ್ ಕುಮಾರ್ ಹೋದ ಕಡೆಗಳಲ್ಲಿ ಜನರು ಹೆಚ್ಚಾಗಿ ಸೇರುತ್ತಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ಎಷ್ಟು ಕಿಲೋಮೀಟರ್ ಪಾದಯಾತ್ರೆ ಗೊತ್ತಾ…?
2023ರ ಡಿಸೆಂಬರ್ 18ರಂದು ವಿನಯ ಮಾರ್ಗ ಟ್ರಸ್ಟ್ ವತಿಯಿಂದ ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜಿನಿ ಗಡಿ ಗ್ರಾಮದಿಂದ ‘ ವಿನಯ ನಡಿಗೆ ಹಳ್ಳಿ ಕಡೆಗೆ ವಿನೂತನ ಬೃಹತ್ ಪಾದಯಾತ್ರೆ ಆರಂಭಿಸಿದ್ದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಂಚರಿಸಿದ ಈ ಪಾದಯಾತ್ರೆ ನಿರೀಕ್ಷೆಗೆ ಮೀರಿ ಯಶಸ್ವಿಯಾಯ್ತು.
ಸುಮಾರು 641 ಕಿಲೋಮೀಟರ್ ಗೂ ಹೆಚ್ಚು ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ವಿನಯ್ ಕುಮಾರ್ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದ ನಾಯಕ.
ಟಿಕೆಟ್ ಆಕಾಂಕ್ಷಿ:
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ವಿನಯ್ ಕುಮಾರ್ ನಡುವೆ ಟಿಕೆಟ್ ಗೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಹೈಕಮಾಂಡ್ ಸ್ಪರ್ಧಿಸುವಂತೆ ಹೇಳಿದೆಯಾದರೂ ಅಂತಿಮವಾಗಿ ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ವಿನಯ್ ಕುಮಾರ್ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡುವುದು ಖಚಿತ ಎಂದು ದೆಹಲಿಯ ಕಾಂಗ್ರೆಸ್ ನ ಉನ್ನತ ಮೂಲಗಳು ತಿಳಿಸಿವೆ.
ವಿನಯ್ ಕುಮಾರ್ ಅವರ ಹೆಸರು ಹೆಚ್ಚು ಚರ್ಚಿತವಾಗಿರುವ ಹೆಸರಾಗಿದ್ದು, ಜಿಲ್ಲೆಯಾದ್ಯಂತ ಪಾದಯಾತ್ರೆ, ಐಎಎಸ್ ಸಂಸ್ಥೆಯ ಯಶೋಗಾಥೆ, ಯುವಕರ ಸೆಳೆಯುವ, ಹಿರಿಯರ ಮನ ಗೆಲ್ಲುವ, ಮಧ್ಯಮವರ್ಗವದರ ಸಂಕಷ್ಟ, ಬಡವರ ಸಮಸ್ಯೆಗಳನ್ನು ಬಲ್ಲವರಾಗಿರುವ ಯುವ ನಾಯಕ. ಹಾಗಾಗಿ, ಸಿಎಂ ಸಿದ್ದರಾಮಯ್ಯರು ಸಹ ವಿನಯ್ ಕುಮಾರ್ ಪರ ಬ್ಯಾಟ್ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರು ಸಹ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಕುರಿತಂತೆ ಉತ್ಸುಹಕತೆ ತೋರಿದ್ದಾರೆ. ಹಿರಿಯರಿಗಿಂತ ಕಿರಿಯರಿಗೆ ಅವಕಾಶ ಮಾಡಿಕೊಡಬೇಕು, ಯುವಕರು ಹೆಚ್ಚು ರಾಜಕಾರಣಕ್ಕೆ ಬಂದರೆ ಪಕ್ಷಕ್ಕೂ ಅನುಕೂಲ, ಎಲ್ಲರನ್ನೂ ಸೆಳೆಯಲು ಸಹಕಾರಿಯಾಗುತ್ತದೆ ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ.
ಹಾಗಾಗಿ, ವಿನಯ್ ಕುಮಾರ್ ಅವರತ್ತಲೂ ಕಾಂಗ್ರೆಸ್ ಹೈಕಮಾಂಡ್ ಚಿತ್ತ ನೆಟ್ಟಿದೆ.