SUDDIKSHANA KANNADA NEWS/ DAVANAGERE/ DATE:29-06-2024
ದಾವಣಗೆರೆ: ನಾನು ರಾಜಕಾರಣದಿಂದ ದೂರ ಆಗಿಲ್ಲ. ದೂರ ಆಗುವುದೂ ಇಲ್ಲ. ದಾವಣಗೆರೆ ಮಾತ್ರವಲ್ಲ, ರಾಜ್ಯಾದ್ಯಂತ ರಾಜಕೀಯ ಪ್ರಜ್ಞೆ ಮೂಡಿಸಬೇಕಾದ ಅಗತ್ಯತೆ ಇದೆ. ಶ್ರೀಮಂತರು, ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ, ದಾವಣಗೆರೆ ಲೋಕಸಭಾ ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದ್ದಾರೆ.
ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ 900 ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದೇನೆ. ನೂರಾರು ಶಾಲೆಗಳನ್ನು ನೋಡಿದ್ದೇನೆ. ಲಕ್ಷಾಂತರ ಜನರನ್ನು ಭೇಟಿ ಆಗಿದ್ದೇನೆ. ಕಷ್ಟ ನೋವು, ನಲಿವಿನಲ್ಲಿ ಪಾಲ್ಗೊಂಡಿದ್ದೇನೆ, ಪಾಲ್ಗೊಳ್ಳುತ್ತಿದ್ದೇನೆ. ಎಂದು ಹೇಳಿದರು.
ಸದ್ಯಕ್ಕೆ ಯಾವುದೇ ಪಕ್ಷ ಸೇರುವ ಚಿಂತನೆ ಇಲ್ಲ. ಇದರ ಬಗ್ಗೆ ಹಗಲು ರಾತ್ರಿ ಯೋಚನೆ ಮಾಡುತ್ತಿದ್ದೇನೆ. ರಾಜ್ಯಾದ್ಯಂತ ಯುವಕರು, ಯುವತಿಯರು, ಹೊಸ ರಾಜಕಾರಣದ ಆಶಾವಾದಿಗಳು ಒಗ್ಗಟ್ಟಾಗಬೇಕು. ಹೊಸಬರು, ಬಡವರಿಗೆ ಹಸಿವಿನ ನೋವು ಹೋಗಬೇಕಾದರೆ ಸಂಘಟನೆ, ಹೋರಾಟ ಅನಿವಾರ್ಯ. ಇದಕ್ಕೆಲ್ಲಾ ಶಿಕ್ಷಣ ಬೇಕೇ ಬೇಕು. ನನ್ನ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗೇಕು ಎಂಬುದು ನನ್ನ ಆಶಯ ಎಂದರು.
ಕೇಂದ್ರ, ರಾಜ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಬೇಸರ ಆಗುತ್ತದೆ. ಲೋಕಸಭೆಗೆ ಹೋದವರು, ವಿಧಾನಸಭೆಗೆ ಹೋದವರು ಜನರ ಕಷ್ಟ, ಸಂಕಷ್ಟ ಆಲಿಸುತ್ತಿಲ್ಲ. ಕೇವಲ ದುಡ್ಡಿರುವ ವ್ಯಕ್ತಿಗಳಿಗೆ ರಾಜಕಾರಣ ಸೀಮಿತವಾಗಿದೆ ಎಂಬ
ಭಾವನೆ ಜನರಲ್ಲಿ ಕಾಡುತ್ತಿದೆ. ಶ್ರೀಮಂತರು, ಶ್ರೀಮಂತರು, ಉದ್ಯಮಿಗಳ ಮಕ್ಕಳು ಸೇರಿದಂತೆ ಕುಟುಂಬ ರಾಜಕಾರಣಕ್ಕೆ ಅವಕಾಶ ಸಿಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸ್ವಾಭಿಮಾನಿಯಾಗಿ ಕಣಕ್ಕಿಳಿದಿದ್ದೇನೆ. ಚುನಾವಣೆ ಎದುರಿಸಿದ್ದೇನೆ. 43907 ಮತಗಳು ನನಗೆ ಬಂದಿವೆ. ಮತ ಹಾಕಿದವರು, ಹಾಕದವರು ನನ್ನ ನೆನಪಿನಲ್ಲಿದ್ದಾರೆ. ವೈಯಕ್ತಿಕವಾಗಿ ನಾನು ನೋವು ಅನುಭವಿಸಿದ್ದೇನೆ. ಚುನಾವಣೆ ಸಮಯದಲ್ಲಿ ನನ್ನ ವಿರುದ್ಧ ಅಪಪ್ರಚಾರ, ಸುಳ್ಳು, ವದಂತಿ ಹಬ್ಬಿಸಿದರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸ್ವಾಭಿಮಾನಿಗಳು ನನಗೆ ಮತ ನೀಡಿದ್ದು ಖುಷಿ ನೀಡಿದೆ. ಪಕ್ಷದ ತತ್ವ, ಸಿದ್ಧಾಂತ, ಒತ್ತಾಯ, ಭಯಕ್ಕೆ ಮತ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಹಾಗಾಗಿ, ಈ ಬಾರಿ ದಾವಣಗೆರೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಸ್ವಯಂ ಇಚ್ಚೆಯಿಂದ ಮತ ಹಾಕಿಲ್ಲ ಎಂಬುದು ಜನರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಹೊಂದಾಣಿಕೆ ರಾಜಕಾರಣ ಜಗಜ್ಜಾಹೀರಾಗಿದೆ. ಕಾಂಗ್ರೆಸ್ – ಬಿಜೆಪಿ ಹೊಂದಾಣಿಕೆ ರಾಜಕಾರಣ ಎಲ್ಲರಿಗೂ ಗೊತ್ತು. ಒಳಗೊಳಗೆ ತಮಗೆ ಬೇಕಾದವರನ್ನು ಗೆಲ್ಲಿಸಲು ತತ್ವ, ಸಿದ್ಧಾಂತ ಗಾಳಿಗೆ ತೂರಿದ್ದಾರೆ. ಇಂಥ ವ್ಯವಸ್ಥೆ ಕರ್ನಾಟಕ ರಾಜಕಾರಣದಲ್ಲಿ ನೋಡುತ್ತಿದ್ದೇವೆ. ಸಾಮಾನ್ಯ ಜನರ ಕಷ್ಟ, ನೋವುಗಳಿಗೆ ಸ್ಪಂದಿಸುವಂಥ ಸಹೃದಯ ಜನಪ್ರತಿನಿಧಿಗಳಿಲ್ಲ. ಅವರಿಗೆ ಬೇಕಾಗಿರುವುದು ನಮ್ಮ ಮತಗಳು. ಅಹಿಂದ ವರ್ಗಕ್ಕೆ ಸುಳ್ಳು ಭರವಸೆ, ಸುಳ್ಳು ಆಶ್ವಾಸನೆ ಕೊಡುತ್ತಾ ನಮ್ಮನ್ನು ಖಾಯಂ ಆಗಿ ಮತ ಬ್ಯಾಂಕ್ ಮಾಡಿಕೊಳ್ಳಲಾಗುತ್ತಿದೆ. ಮತಕ್ಕಾಗಿ ಹಣ ನೀಡುವುದು, ಸುಳ್ಳು ಭರವಸೆ ನೀಡುವುದು ಮುಂದುವರಿದುಕೊಂಡು ಬರುತ್ತಿದೆ. ಅಧಿಕಾರಕ್ಕೆ ಬಂದ ಮೇಲೆ ಜನರಿಂದ ದೂರ ಆಗುತ್ತಾರೆ. ಐದು ವರ್ಷಕ್ಕೊಮ್ಮೆ ಇದು ಪುನಾರಾವರ್ತನೆ ಆಗುತ್ತಿದೆ. ಕೇವಲ ನೋಡುವುದಲ್ಲ, ನಾವು ಅನುಭವಿಸಬೇಕಾದ ದುಃಸ್ಥಿತಿಯಲ್ಲಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿರುವ ಅಸಮಾನತೆ ತೊಲಗಿಲ್ಲ. ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ ಎಂಬುದು ಘೋರ ಅನ್ಯಾಯ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಆಗ ಮಾತ್ರ ರಾಜಕಾರಣ ಮಾತ್ರವಲ್ಲ,
ಅನೇಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಬಹುದು. ಹಿಂದುಳಿದೇ ಇದ್ದು ನಮಗೆ ಮತ ಹಾಕಬೇಕು ಎಂಬುದಷ್ಟೇ ಬಂಡವಾಳಶಾಹಿಗಳ ಗುರಿಯಾಗಿದೆ. ನಮ್ಮಲ್ಲಿ ಒಗ್ಗಟ್ಟು ಬರಬೇಕು. ರಾಜಕೀಯ ಪ್ರಜ್ಞೆ ಬರಬೇಕಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಇರಬೇಕು. ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಸಂಘಟನೆ, ಹೋರಾಟ ಮಾಡಲು ಆಗದಂಥ ಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದರು.
ಅಧಿಕಾರ ದುರ್ಬಳಕೆ ಮಾಡಿಕೊಂಡು ಅತ್ಯಂತ ಶ್ರೀಮಂತರಾಗಿರುವವರಿಂದ ದಬ್ಬಾಳಿಕೆ ನಡೆಯುತ್ತಲೇ ಇದೆ. ನಾನು ಇದರ ವಿರುದ್ಧ ಹೋರಾಟ ಮಾಡಲು ಬಂದೆ. 43907 ಮತಗಳು ಬಂದಿವೆ. ದುಡ್ಡು ಕೊಟ್ಟರೆ ಮತ ಹಾಕುತ್ತಾರೆ, ಇಲ್ಲದಿದ್ದರೆ ಮತ ಹಾಕಲ್ಲ ಎಂಬ ಮಾತು ಈ ಬಾರಿ ಬಲವಾಗಿ ಕೇಳಿ ಬಂತು. ದುಡ್ಡು ಇದ್ದವರು ಗೆದ್ದ ಮೇಲೆ ನಮ್ಮ ಮೇಲೆ ಸವಾರಿ ಮಾಡುತ್ತಾರೆ. ಬರುವ ದಿನಗಳಲ್ಲಿ ಎಚ್ಚೆತ್ತುಕೊಳ್ಳಬೇಕು. ದುಡ್ಡಿಗಾಗಿ ಬರುವವರ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು. ಸಮಾಜಸೇವೆಗೆ ಬರುವವರಿಗೆ ಅಧಿಕಾರ ಸಿಗುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮಕ್ಕಳಿಗೆ ಎಷ್ಟೇ ಕಷ್ಟವಾದರೂ ಒಳ್ಳೆಯ ಶಿಕ್ಷಣ ಕೊಡಿಸಿ. ಆಗ ಧೈರ್ಯ ಬರುತ್ತೆ. ಸರ್ಕಾರಿ ನೌಕರರಾಗಬೇಕು, ರಾಜಕಾರಣಿಗಳಾಗಬೇಕು, ಉದ್ಯಮಿಗಳಾಗಬೇಕು. ಆಗ ಮಾತ್ರ ದಬ್ಬಾಳಿಕೆ ಮಾಡುವವರಿಗೆ ಸರಿಯಾದ ಉತ್ತರ ನೀಡಲು ಸಾಧ್ಯ. ದರ್ಪ, ದೌರ್ಜನ್ಯ ಕಡಿಮೆ ಆಗುತ್ತದೆ. ಸ್ವಾಭಿಮಾನಿಗಳಾಗಿ ಚುನಾವಣೆಗೆ ನಿಂತು ಗೆದ್ದರೆ ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿದರು.