SUDDIKSHANA KANNADA NEWS/ DAVANAGERE/ DATE:19-03-2025
ದಾವಣಗೆರೆ: ಹೊನ್ನಾಳಿ (Honnali) – ನ್ಯಾಮತಿ ಅವಳಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲು ಕ್ವಾರೆಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ದಾವಣಗೆರೆ (Davanagere) ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, ಉಪವಿಭಾಗಾಧಿಕಾರಿ ಅಭಿಷೇಕ್, ರಶ್ಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.
ಸ್ಥಳಕ್ಕೆ ಭೇಟಿ ಮಾಡಿ ಜನರ ಸಂಕಷ್ಟ ಆಲಿಸಿ ಪರಿಶೀಲನೆ ನಡೆಸಿದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು, ಕೂಡಲೇ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಕ್ರಷರ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು, ಊರಿನ ಸಮಸ್ಯೆಯನ್ನು ಅಧಿಕಾರಿಗಳು ಹತ್ತಿರದಿಂದ ಗಮನಿಸಿದ್ದಾರೆ. ಜನರ ಸಮಸ್ಯೆಗಳು ಅನುಭವಕ್ಕೆ ಬರುತ್ತಿವೆ. ನಾನು ಹಲವು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಆದ್ರೆ, ಇಲ್ಲಿ ಬರುತ್ತಿರುವ ಧೂಳು ಹೆಚ್ಚಾಗಿದೆ. ಮಕ್ಕಳು ಈ ವಾತಾವರಣದಲ್ಲಿ ಪಾಠ ಕಲಿಯಲು ಆಗದು. ಯಾವುದೇ ರಸ್ತೆಯಾದರೂ ಅಲ್ಲಿಂದ ನೂರು ಮೀಟರ್ ಆಚೆ 100 ಮೀಟರ್ ಆಚೆ ಇರಬೇಕು. ಈ ಬಗ್ಗೆ ಪರಿಶೀಲಿಸಬೇಕು. ಜನರು ತೊಂದರೆಗಳ ಬಗ್ಗೆ ಹೇಳಿದಾಗ ಸೇಫ್ ಜೋನ್ 500 ಮೀಟರ್ ದೂರದವರೆಗೆ ಇರಬೇಕು. ಇದೆಲ್ಲಾ ಕಾನೂನು ಬದ್ದವಾಗಿ ನೀಡಬೇತು. 2011ರಲ್ಲಿ ಕ್ರಷರ್ ಆಕ್ಟ್ ಅಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕಾಗುತ್ತದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಂಚಿಕೊಪ್ಪ ಗ್ರಾಮ ಪಂಚಾಯಿಯ ಆರುಂಡಿ ಗ್ರಾಮದ ವ್ಯಾಪ್ತಿಯಲ್ಲಿನ ಕಲ್ಲಿನ ಕ್ಯಾರೆ ಕ್ರಷರ್ ಹಾಗೂ ಗಣಿಗಾರಿಕೆ ಕಾನೂನು ನಿಯಮಬಾಹಿರವಾಗಿ ನಡೆಯುತ್ತಿದ್ದು, ಗ್ರಾಮದ ರಸ್ತೆ ಹಾಳಾಗಿದೆ. ಧೂಳಿನಿಂದ ಗ್ರಾಮಸ್ಥರಿಗೆ ಅನಾನುಕೂಲವಾಗಿದೆ. ರೈತರು
ಬೆಳೆದ ಬೆಳೆಗಳು ಹಾಳಾಗಿವೆ. ನೀರು ಕುಡಿಯಲು ಯೋಗ್ಯವಲ್ಲದಂತಾಗಿದೆ. ಅಂತರ್ಜಲ ಮಟ್ಟವೂ ಕುಸಿದಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಗ್ರಾಮದ ದೇವನ್ಮಾನಗಳು ಹಾಗೂ ಆರುಂಡಿ ಗ್ರಾಮದ ವಾಸದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಗಳಲ್ಲಿ ವಾಸ ಮಾಡುವುದೇ ಕಷ್ಟದಂತಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ನಡೆಸುತ್ತಿರುವ ಪ್ರತಿಯೊಂದು ಕ್ಯಾರೆಗಳಲ್ಲಿ ಯಾವುದೇ ತಡೆಗೋಡೆ ಇಲ್ಲ. ಮರಗಿಡಗಳನ್ನು ಬೆಳೆಸಿಲ್ಲ. ತಂತಿ ಬೇಲಿ ಹಾಕುವುದೂ ಸೇರಿದಂತೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಊರಿಗೆ ಹತ್ತಿರವಾಗಿ ಕ್ರಷರ್, ಗಣಿಗಾರಿಕೆ
ನಡೆಯುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಆರುಂಡಿ ಗ್ರಾಮದ ಶಾಲಾ ಮಕ್ಕಳಿಗೆ ಕಲ್ಲುಗಳನ್ನು ಪುಡಿ ಮಾಡಲು ಬಳಸುವ ಸ್ಫೋಟಕಗಳಿಂದ ಶ್ರವಣ ಶಕ್ತಿ ಕುಂದಿದ್ದು ಮತ್ತು ಧೂಳಿನಿಂದ ಉಸಿರಾಟದ ತೊಂದರೆಯೂ ಆಗುತ್ತಿದೆ. ಅನೇಕ ಕಾಯಿಲೆಗಳು, ಚರ್ಮರೋಗಗಳು ಬಾಧಿಸುತ್ತಿವೆ. ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ: ಆಧಾರ್ ನೊಂದಿಗೆ ಎಪಿಕ್ ಜೋಡಣೆಗೆ ಶೀಘ್ರ ಕ್ರಮ: ಆಯುಕ್ತ ಜ್ಞಾನೇಶ್ ಕುಮಾರ್
ಆರುಂಡಿ ಗ್ರಾಮ ಕೃಷಿ ಅವಲಂಬಿತ ಪ್ರದೇಶ. ಇಲ್ಲಿರುವ ಕ್ಯಾರಿಗಳಿಂದ ಬರುತ್ತಿರುವ ಧೂಳಿನ ಕಣಗಳು ಬೆಳಗಳ ಮೇಲೆ ಬಿದ್ದು ಬೆಳೆದ ಫಸಲು ಕೈಗೆ ಬರದಂಥ ಸ್ಥಿತಿ ನಿರ್ಮಾಣವಾಗಿದೆ. ಉಪಕಸುಬು ಪಶುಸಂಗೋಪನೆಯ ಮೇಲೂ ನೇರ ಪರಿಣಾಮ ಬೀರಿದೆ. ಕೂಡಲೇ ಕ್ರಷರ್ ನಿಲ್ಲಿಸುವಂತೆ ಈ ಹಿಂದೆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಲ್ಲು ಕೋರೆಯ ಲಾರಿಗಳು, ಹಿಟಾಚಿಗಳನ್ನೂ ಊರಿನ ಮುಂದೆ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಹಶಿಲ್ದಾರ್ ಅವರನ್ನು ಗ್ರಾಮಕ್ಕೆ ಕರೆಯಿಸಿ ಮನವಿ ನೀಡಿದ್ದಾರೆ. ಆದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ ಎಂದು ವಿನಯ್ ಕುಮಾರ್ ತಿಳಿಸಿದರು.
ಸ್ವತಂತ್ರವಾಗಿ, ಶುದ್ಧ ಪರಿಸರದಲ್ಲಿ ಬದುಕುವ ಹಕ್ಕು ಪ್ರತಿಯೊಬ್ಬ ಭಾರತೀಯನ ಕನಸು. ಆದ್ರೆ, ಆರುಂಡಿ ಗ್ರಾಮಸ್ಥರಿಗೆ ಮರೀಚಿಕೆಯಾಗಿದೆ. ಶುದ್ಧ ಮತ್ತು ಆರೋಗ್ಯಕರವಾದ ಪರಿಸರದಲ್ಲಿ ಗ್ರಾಮಸ್ಥರು, ಮಕ್ಕಳು, ಜಾನುವಾರುಗಳು ಜೀವಿಸಬೇಕಾದರೆ ಕ್ರಷರ್ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ವಿನಯ್ ಕುಮಾರ್ ಅವರು ಬಿರುಕುಬಿಟ್ಟ ಮನೆಗಳು, ಮಕ್ಕಳಿಗೆ ಆಗುತ್ತಿರುವ ತೊಂದರೆ, ಹಾಳಾಗಿರುವ ಬೆಳೆಗಳನ್ನು ವೀಕ್ಷಿಸಿದರು. ಗ್ರಾಮದ ಮುಖಂಡರು, ಮಹಿಳೆಯರು, ಯುವಕರು, ಯುವತಿಯರು ಈ ವೇಳೆ ಹಾಜರಿದ್ದರು.