SUDDIKSHANA KANNADA NEWS/ DAVANAGERE/ DATE:15-01-2025
ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ನಾಲಗೆ ಬಿಗಿಹಿಡಿದು ಮಾತನಾಡಬೇಕು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಯಡಿಯೂರಪ್ಪ ಗುಡುಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಇತ್ತೀಚೆಗೆ ಬಿಜೆಪಿಗೆ ಬಂದವರು. ಯಡಿಯೂರಪ್ಪರ ಬಗ್ಗೆ ಮಾತನಾಡುವಾಗ ಎಚ್ಚರದಿಂದಿರಬೇಕು. ದೆಹಲಿ ಮಟ್ಟದಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಿ. ಬಿಜೆಪಿ ಹೈಕಮಾಂಡ್ ಮುಂದೆ ಹೇಳಿಕೊಳ್ಳಲಿ ಎಂದು ಹೇಳಿದರು.
ಬಿ. ಎಸ್. ಯಡಿಯೂರಪ್ಪ ಅವರು ಅಪ್ರತಿಮ ಹೋರಾಟಗಾರ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದ ಪ್ರವಾಸ ಮಾಡಿ ಹಳ್ಳಿ ಹಳ್ಳಿಗೆ ಹೋಗಿ ಪಕ್ಷ ಸಂಘಟನೆ ಮಾಡಿದವರು. ಅನಂತ್ ಕುಮಾರ್ ಸೇರಿದಂತೆ ಹಿರಿಯರೊಟ್ಟಿಗೆ ಹೋಗಿ ಪಕ್ಷ ಸಂಘಟಿಸಿದ್ದಾರೆ. ಯಡಿಯೂರಪ್ಪರ ಬಗ್ಗೆ ನಾಲಗೆ ಬಿಗಿಹಿಡಿದು ಮಾತನಾಡಬೇಕು. ರಾಜ್ಯ ಘಟಕದ ಅಧ್ಯಕ್ಷನಾಗಿ ಎಚ್ಚರಿಕೆ ನೀಡುತ್ತಿದ್ದೇನೆ. ಇದೇ ರೀತಿ ಮಾತನಾಡುವುದನ್ನು ಮುಂದುವರಿಸಿದರೆ ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಲಕ್ಷಾಂತರ ಕಾರ್ಯಕರ್ತರು, ಮುಖಂಡರು ಯಡಿಯೂರಪ್ಪರ ಪರ ಇದ್ದಾರೆ. ಇನ್ನು ಮುಂದೆ ಯಾವುದೇ ಹೇಳಿಕೆ ಕೊಡುವ ಮೊದಲು ಎಚ್ಚರ ವಹಿಸಬೇಕು ಎಂದು ಖಡಕ್ ಸಂದೇಶ ನೀಡಿದ್ದಾರೆ.