
ಚೆನ್ನೈ/ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರೋಬ್ಬರಿ 121 ಕೆಜಿ ಚಿನ್ನದ ಆಭರಣಗಳನ್ನು ದೇಣಿಗೆಯಾಗಿ ನೀಡಿರುವ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ನವೆಂಬರ್ 26ರಂದು ತಮ್ಮ ಪತ್ನಿ ರಾಧಿಕಾ ಜೈನ್ ಜೊತೆಗೂಡಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 46 ಬಗೆಯ ವಿಶೇಷ ಕರಕುಶಲ ಚಿನ್ನದ ಆಭರಣಗಳನ್ನು ಅರ್ಪಿಸಿದ್ದಾರೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ನಡೆದ ಈ ಸಮರ್ಪಣೆಯಲ್ಲಿ ಕಿರೀಟ, ಹಾರಗಳು, ತೋಳುಬಂದಿಗಳು, ಸೊಂಟದ ಆಭರಣಗಳು ಸೇರಿದಂತೆ ವಜ್ರ ಖಚಿತ ವೈವಿಧ್ಯಮಯ ಸಾಂಪ್ರದಾಯಿಕ ಒಡವೆಗಳು ಸೇರಿವೆ.
ಅಂದಾಜು 200 ಕೋಟಿ ರೂ. ಮೌಲ್ಯದ ಈ ಬೃಹತ್ ದೇಣಿಗೆಯ ಹಿಂದೆ ವರ್ಧಮಾನ್ ಜೈನ್ ಅವರ ಮೂರು ದಶಕಗಳ ಸುದೀರ್ಘ ಉದ್ಯಮ ಪಯಣವಿದೆ. ಜೈನ್ ಅವರು 1997ರಲ್ಲಿ ‘ವಿಷನ್ ಹೆಲ್ತ್ಸೋರ್ಸ್’ ಸಂಸ್ಥೆಯನ್ನು ಸಹ-ಸ್ಥಾಪಿಸುವ ಮೂಲಕ ತಮ್ಮ ಉದ್ಯಮ ಜೀವನ ಆರಂಭಿಸಿದ್ದರು.
ಬೃಹತ್ ದೇಣಿಗೆ ವಿವರ: ಪತ್ನಿ ರಾಧಿಕಾ ಜೈನ್ ಅವರೊಂದಿಗೆ ಒಟ್ಟು 121 ಕೆಜಿ ತೂಕದ, 46 ವಿಶೇಷ ಚಿನ್ನದ ಆಭರಣಗಳನ್ನು ತಿರುಪತಿ ದೇವರಿಗೆ ಅರ್ಪಣೆ.
ಉದ್ಯಮ ಹಿನ್ನೆಲೆ: ಆರೋಗ್ಯ ರಕ್ಷಣೆ ತಂತ್ರಜ್ಞಾನ ಮತ್ತು ಆದಾಯ ಚಕ್ರ ನಿರ್ವಹಣೆ ಕ್ಷೇತ್ರಕ್ಕೆ ಸಂಬಂಧಿಸಿದ ‘ಆಕ್ಸೆಸ್ ಹೆಲ್ತ್ಕೇರ್’ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರು.
ವೃತ್ತಿಪರ ಯಶಸ್ಸು: ಪ್ರಸಿದ್ಧ ಪೆರೊಟ್ ಸಿಸ್ಟಮ್ಸ್ ಹಾಗೂ ಡೆಲ್ ಸರ್ವೀಸಸ್ ಮೂಲಕ ಬೆಳೆದು, ಇತ್ತೀಚೆಗೆ ಅಮೆರಿಕದ ಖಾಸಗಿ ಇಕ್ವಿಟಿ ಸಂಸ್ಥೆಯಿಂದ ಕೋಟ್ಯಂತರ ರೂ. ಮೌಲ್ಯದ ಬಂಡವಾಳ ಆಕರ್ಷಿಸಿರುವ ಜಾಗತಿಕ ಉದ್ಯಮಿ.
ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಸ್ಟ್ಯಾಟಿಸ್ಟಿಕ್ಸ್ನಲ್ಲಿ ಪದವಿ ಪಡೆದಿರುವ ವರ್ಧಮಾನ್ ಜೈನ್, ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರೋಗ್ಯ ತಂತ್ರಜ್ಞಾನ ಮತ್ತು ಔಟ್ಸೋರ್ಸಿಂಗ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಜೈನ್, ಇದೀಗ ಐತಿಹಾಸಿಕ ದೇಣಿಗೆಯ ಮೂಲಕ ಭಕ್ತಿ ಸಮರ್ಪಿಸಿದ್ದಾರೆ.




