
ನಾಗ್ಪುರ: ಸಂವಿಧಾನ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗ್ಪುರದ ಐತಿಹಾಸಿಕ ಸಂವಿಧಾನ ಚೌಕದಲ್ಲಿ ಕಾಕ್ರೋಚ್ ಜನತಾ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಪ್ರತಿಭಟನಾ ರಾಲಿಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಅವರು, “ನಾನು ಇಲ್ಲೇ ಸಂವಿಧಾನ ಚೌಕದಲ್ಲಿದ್ದೇನೆ, ಧೈರ್ಯವಿದ್ದರೆ ಬಂದು ನನ್ನನ್ನು ಬಂಧಿಸಿ” ಎಂದು ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ನಾಗ್ಪುರದಲ್ಲಿ ಮಾತನಾಡಿದ ದಿಪ್ಕೆ, ದೇಶದ ಪ್ರತಿಯೊಂದು ಸಾಂಸ್ಥಿಕ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹೈಜಾಕ್ ಮಾಡಿದೆ ಎಂದು ಆರೋಪಿಸಿದರು.
ಜಂತರ್ ಮಂತರ್ ಪ್ರತಿಭಟನೆಯ ಬಳಿಕ ಸರ್ಕಾರದ ಕ್ರಮಗಳ ಬಗ್ಗೆ ಮಾತನಾಡಿರುವ ಸಿಜೆಪಿ ನಾಯಕರು, ಸರ್ಕಾರದ ದಬ್ಬಾಳಿಕೆಗೆ ಹೆದರುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಮಹಿಳಾ ಮೀಸಲಾತಿಯನ್ನು ಶೇ. 33ರಿಂದ ಶೇ. 50ಕ್ಕೆ ಏರಿಸಬೇಕು ಹಾಗೂ ಜನಗಣತಿಗೂ ಮುನ್ನ ಡಿಲಿಮಿಟೇಶನ್ (ಕ್ಷೇತ್ರ ಪುನರ್ವಿಂಗಡಣೆ) ತರಲು ಹೊರಟಿರುವ ಹಿಂದಿನ ತರ್ಕವೇನು ಎಂದು ಪ್ರಶ್ನಿಸಿದರು.
ಈ ರಾಲಿಯಲ್ಲಿ ಸಿಜೆಪಿ ನಾಯಕ ಅಶುತೋಷ್ ರಂಕಾ ಹಾಗೂ ನಟ ಪ್ರಕಾಶ್ ರಾಜ್ ಕೂಡ ಉಪಸ್ಥಿತರಿದ್ದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಲುಕ್ ಔಟ್ ನೋಟಿಸ್‌ಗೆ ತಿರುಗೇಟು: ತಮ್ಮ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವುದಕ್ಕೆ ಹೆದರುವುದಿಲ್ಲ ಎಂದ ಅಭಿಜಿತ್ ದಿಪ್ಕೆ, “ನಾನು ಇಲ್ಲಿಯೇ ಸಂವಿಧಾನ ಚೌಕದಲ್ಲಿದ್ದೇನೆ, ದಮ್ಮಿದ್ದರೆ ಬಂಧಿಸಿ” ಎಂದು ಬಹಿರಂಗ ಸವಾಲು.
ಸಂವಿಧಾನ ರಕ್ಷಣೆಗಾಗಿ ಹೋರಾಟ: ದೇಶದ ಪ್ರತಿಯೊಂದು ಸಂಸ್ಥೆಯೂ ಹೈಜಾಕ್ ಆಗಿದ್ದು, ಸಂವಿಧಾನವನ್ನು ರಕ್ಷಿಸಲು ದೇಶಾದ್ಯಂತ ಗ್ರಾಮೀಣ ಮಟ್ಟದಲ್ಲೂ ಧ್ವನಿ ಎತ್ತುವುದಾಗಿ ಸಿಜೆಪಿ ನಾಯಕರ ಘೋಷಣೆ.
ಪ್ರಮುಖರ ಭಾಷಣ: ನಾಗ್ಪುರದ ಸಂವಿಧಾನ ಚೌಕದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಭಾಗವಹಿಸಿ ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.
ಸರ್ಕಾರದ ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲವೆಂದಿರುವ ಸಿಜೆಪಿ ನಾಯಕರು, 2029ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹೋರಾಟವನ್ನು ರಾಜ್ಯಾದ್ಯಂತ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.




