Home ಕ್ರೈಂ ನ್ಯೂಸ್ BIG NEWS: ಪೋಕ್ಸೋ ಪ್ರಕರಣ: ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್, ದಾವಣಗೆರೆ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಮಂಜೂರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

BIG NEWS: ಪೋಕ್ಸೋ ಪ್ರಕರಣ: ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್, ದಾವಣಗೆರೆ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಮಂಜೂರು!

Share
ದಾವಣಗೆರೆ
Share

ದಾವಣಗೆರೆ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ಮೇಲಿನ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಹೈಕೋರ್ಟ್ ಸೂಚನೆ ಬೆನ್ನಲ್ಲೇ ದಾವಣಗೆರೆಯ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಶ್ರೀಗಳಿಗೆ ಷರತ್ತುಬದ್ಧ ರೆಗ್ಯುಲರ್ ಜಾಮೀನು (Regular Bail) ಮಂಜೂರು ಮಾಡಿದೆ.

ಮಠದ ಟ್ರಸ್ಟ್ ಹಾಗೂ ಸ್ವಾಮೀಜಿ ನಡುವಿನ ಆಂತರಿಕ ಆಡಳಿತಾತ್ಮಕ ಹಗ್ಗಜಗ್ಗಾಟದ ನಡುವೆ ದಾಖಲಾಗಿದ್ದ ಈ ಲೈಂಗಿಕ ದೌರ್ಜನ್ಯದ ಕೇಸ್‌ನಲ್ಲಿ ಸದ್ಯ ವಚನಾನಂದ ಶ್ರೀಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದ್ದು, ಅವರ ಬೆಂಬಲಿಗರಲ್ಲಿ ಹರ್ಷ ಮೂಡಿಸಿದೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ಜಾಮೀನು ಅರ್ಜಿ

ಈ ಹಿಂದೆ ವಚನಾನಂದ ಶ್ರೀಗಳು ಕೆಳ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆದರೆ, ಇದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಿಯಮಾನುಸಾರ ಸಂತ್ರಸ್ತರ ಅಹವಾಲು ಆಲಿಸದ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಶ್ರೀಗಳ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿತ್ತು. ಆದರೆ, ನಿಯಮಿತ ಜಾಮೀನು (Regular Bail) ಕೋರಿ ಅರ್ಜಿ ಸಲ್ಲಿಸಲು 3 ವಾರಗಳ ಕಾಲಾವಕಾಶ ನೀಡಿ ಬಂಧನದಿಂದ ರಕ್ಷಣೆ ನೀಡಿತ್ತು. ಅದರಂತೆ ದಾವಣಗೆರೆ ಪೋಕ್ಸೋ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಂದು ಬೇಲ್ ಮಂಜೂರು ಮಾಡಿದ್ದಾರೆ.

ನ್ಯಾಯಾಲಯ ವಿಧಿಸಿರುವ ಪ್ರಮುಖ ಷರತ್ತುಗಳು:

  • ಪ್ರಕರಣದ ಯಾವುದೇ ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಬಾರದು.

  • ದೂರುದಾರರಿಗೆ ಅಥವಾ ಸಾಕ್ಷಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು.

  • ಹರಿಹರ ಗ್ರಾಮಾಂತರ ಠಾಣಾ ಪೊಲೀಸರ ಮುಂದಿನ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು.

“ಇದು ಸತ್ಯಕ್ಕೆ ಸಿಕ್ಕ ಜಯ” – ಸ್ವಾಮೀಜಿ ಪರ ವಕೀಲರ ಹೇಳಿಕೆ

ಜಾಮೀನು ಸಿಕ್ಕ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸ್ವಾಮೀಜಿ ಪರ ವಕೀಲರಾದ ಎಸ್.ವಿ. ಪಾಟೀಲ್, “ವಚನಾನಂದ ಸ್ವಾಮೀಜಿಯವರನ್ನು ಹೇಗಾದರೂ ಮಾಡಿ ಮಠದಿಂದ ಹೊರದಬ್ಬಬೇಕು ಎಂಬ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಈ ಪೋಕ್ಸೋ ಕೇಸ್ ದಾಖಲಿಸಲಾಗಿತ್ತು. ನ್ಯಾಯಾಲಯದಲ್ಲಿ ಸತ್ಯಕ್ಕೆ, ಧರ್ಮಕ್ಕೆ ಜಯ ಸಿಕ್ಕಿದೆ. ನಾಳೆ ಶ್ರೀಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಬಾಂಡ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದ್ದಾರೆ,” ಎಂದರು.

ಇನ್ನೊಂದೆಡೆ ‘ಲೆಕ್ಕ ಕೊಡಿ ಸಮಿತಿ’ ಅಧ್ಯಕ್ಷ ಪರಮೇಶ್ವರ ಗೌಡ ಅವರು ಮಠದ ಟ್ರಸ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಟ್ರಸ್ಟ್‌ನವರ ವಾಮಮಾರ್ಗದ ಸಂಚು ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಲು ಸಂತ್ರಸ್ತರ ಪರ ವಕೀಲರ ಸಿದ್ಧತೆ

ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ತಿಳಿಸಿರುವ ಸಂತ್ರಸ್ತ ಬಾಲಕರ ಪರ ವಕೀಲ ರಮೇಶ್ ಕಲಾಲ್, “ಜಾಮೀನು ಮಂಜೂರಾದ ಆದೇಶದ ಪ್ರತಿ ಇನ್ನು ನಮಗೆ ಸಿಕ್ಕಿಲ್ಲ. ನ್ಯಾಯಾಲಯ ಯಾವ ಷರತ್ತುಗಳ ಆಧಾರದ ಮೇಲೆ ಬೇಲ್ ನೀಡಿದೆ ಎಂಬುದನ್ನು ಪರಿಶೀಲಿಸಿ, ಕಕ್ಷೀದಾರರೊಂದಿಗೆ ಚರ್ಚಿಸಿದ ಬಳಿಕ ಜಾಮೀನು ರದ್ದತಿ ಕೋರಿ ಮತ್ತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಬೃಹತ್ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಈ ಕಾನೂನು ಸಮರ ಎತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share

Leave a comment

Leave a Reply

Your email address will not be published. Required fields are marked *