Home ದಾವಣಗೆರೆ ಕಾರ್ಯಕರ್ತರ ವಿಶ್ವಾಸಕ್ಕೆ ಪಡೆಯದೇ ದಾವಣಗೆರೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷ, ಪದಾಧಿಕಾರಿಗಳ ನೇಮಕಕ್ಕೆ ಕೃಷ್ಣಮೂರ್ತಿ ಪವಾರ್ ಆಕ್ರೋಶ
ದಾವಣಗೆರೆಬೆಂಗಳೂರು

ಕಾರ್ಯಕರ್ತರ ವಿಶ್ವಾಸಕ್ಕೆ ಪಡೆಯದೇ ದಾವಣಗೆರೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷ, ಪದಾಧಿಕಾರಿಗಳ ನೇಮಕಕ್ಕೆ ಕೃಷ್ಣಮೂರ್ತಿ ಪವಾರ್ ಆಕ್ರೋಶ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಏಕಪಕ್ಷೀಯವಾಗಿ ನೇಮಕ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರ ವಿಶ್ವಾಸಕ್ಕೆ ಪಡೆಯದೇ ನೇಮಿಸಿರುವ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ. ಬಿಜೆಪಿ ಪಕ್ಷದ ಸಂಘಟನೆಗೆ ದುಡಿದವರನ್ನು ಬಿಟ್ಟು ನಾಲ್ಕೈದು ಮಂದಿ ಸೇರಿ ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೃಷ್ಣಮೂರ್ತಿ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಶೇಖರ್ ನಾಗಪ್ಪ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಿದ್ದರೂ ಪೂರ್ಣ ಪ್ರಮಾಣದ ಸಮಿತಿ ರಚಿಸಲು ಬಿಡಲಿಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಭಾಷಣದಲ್ಲಿ ಹೇಳುತ್ತಾರೆ. ಬೂತ್ ಮಟ್ಟದ ಕಾರ್ಯಕರ್ತರು, ಪಕ್ಷಕ್ಕಾಗಿ ದುಡಿದ ನಾಯಕರು, ಜಿಲ್ಲಾ ಮುಖಂಡರು, ತಾಲೂಕು ಮುಖಂಡರ ಸಭೆ ಕರೆಯದೇ ನೇಮಕ ಮಾಡಿರುವುದು ಆಶ್ಚರ್ಯ ತಂದಿದೆ. ಬದಲಾವಣೆ ಮಾಡಲು ಕಾರಣವನ್ನೂ ನೀಡಿಲ್ಲ. ಪಕ್ಷವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಲಾಗುತ್ತಿದೆ ಎಂಬುದನ್ನು ಊಹಿಸಿದರೆ ಭಯ ಉಂಟಾಗುವಂತೆ ನೇಮಕ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಯ ಮುಖ್ಯಾಂಶಗಳು

  • ಏಕಪಕ್ಷೀಯ ನೇಮಕಾತಿ ಆರೋಪ: ದಾವಣಗೆರೆ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಾತಿಯನ್ನು ಕಾರ್ಯಕರ್ತರು ಹಾಗೂ ಮುಖಂಡರ ವಿಶ್ವಾಸಕ್ಕೆ ಪಡೆಯದೇ ಏಕಪಕ್ಷೀಯವಾಗಿ ಮಾಡಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಾಜಶೇಖರ್ ನಾಗಪ್ಪ ಅವರಿಗೆ ಅಪಮಾನ: ಈ ಹಿಂದೆ ರಾಜಶೇಖರ್ ನಾಗಪ್ಪ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದರೂ ಅವರಿಗೆ ಪೂರ್ಣ ಪ್ರಮಾಣದ ಸಮಿತಿ ರಚಿಸಲು ಬಿಡದೆ, ದಿಢೀರ್ ಆಗಿ ಬದಲಾವಣೆ ಮಾಡಿರುವುದು ಅವರಿಗೆ ಮಾಡಿದ ಅಪಮಾನ ಎಂದು ಅವರು ಹೇಳಿದ್ದಾರೆ.

  • ಹೊಂದಾಣಿಕೆ ರಾಜಕೀಯದ ದೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಹೊಂದಾಣಿಕೆ ರಾಜಕಾರಣವೇ ಕಾರಣ. ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರಂತಹ ಹಿರಿಯ ನಾಯಕರನ್ನು ಒಟ್ಟಿಗೆ ಕೂರಿಸಿ ಚರ್ಚಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಕಾರ್ಯಕರ್ತರ ಅಲಕ್ಷ್ಯ: ಬಿಜೆಪಿ ಕೇವಲ ನಾಲ್ಕೈದು ಜನರ ಸ್ವತ್ತಲ್ಲ, ಇದು ಕಾರ್ಯಕರ್ತರ ಪಕ್ಷ. ಆದರೆ ದುಡಿದವರನ್ನು ಬಿಟ್ಟು ಈಗ ಮಾಡಿರುವ ನೇಮಕಾತಿಗಳು ಪಕ್ಷವನ್ನು ಮುಳುಗಿಸಲು ನಡೆಸಿರುವ ಸಂಚಿನಂತೆ ಕಾಣಿಸುತ್ತಿದೆ ಎಂದು ಪವಾರ್ ಕಿಡಿಕಾರಿದ್ದಾರೆ.

ಬಿಜೆಪಿ ಯಾರಪ್ಪನ ಸ್ವತ್ತು, ಆಸ್ತಿ ಅಲ್ಲ. ಇದು ಕಾರ್ಯಕರ್ತರ ಪಕ್ಷ. ಗೋಲಿಬಾರ್ ನಲ್ಲಿ ಎಂಟು ಮಂದಿ ಬಂದೂಕಿನ ಗುಂಡು ತಗುಲಿ ಸಾವು ಕಂಡಿದ್ದಾರೆ. ಇವರ ಸಾವಿನ ಮೇಲೆ ಅಧಿಕಾರ ನಡೆಸುತ್ತಿರುವವರು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಚಿವರಾಗಿ,
ಶಾಸಕರಾಗಿ, ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಅನುಭವಿಸಿರುವವರು ಪಕ್ಷದಲ್ಲಿ ಆಗಿರುವ ಸಮಸ್ಯೆಗಳನ್ನು ಸರಿಪಡಿಸುವುದನ್ನು ಬಿಟ್ಟು ಎಷ್ಟು ಮಂದಿ ಬಲಿ ಕೊಡಬೇಕೆಂದು ಇನ್ನೂ ಹವಣಿಸುತ್ತಿದ್ದೀರಾ
ಎಂದು ಕಿಡಿಕಾರಿದ್ದಾರೆ.

ರಾಜಶೇಖರ್ ನಾಗಪ್ಪರ ಬದಲಾವಣೆ ದಿಢೀರ್ ಆಗಿದೆ. ಇದು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ರಾಜಶೇಖರ್ ಅವರಿಗೆ ಮಾಡಿರುವ ಅಪಮಾನ. ಪಕ್ಷದ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ಕಾಣಲು ಹೊಂದಾಣಿಕೆ ರಾಜಕಾರಣವೇ ಕಾರಣ. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರಂಥ ಹಿರಿಯ ನಾಯಕರನ್ನು ಒಟ್ಟಿಗೆ ಕೂರಿಸಿ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನೇಮಕವಾಗಬೇಕಾಗಿತ್ತು. ಆದರೆ ಈ ರೀತಿ ಆಗಿಲ್ಲ. ಈಗಿನ ಜಿಲ್ಲಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ನೇಮಕ ನೋಡಿದರೆ ಪಕ್ಷ ಮುಳುಗಿಸಲು ಹೂಡಿರುವ ಸಂಚು ಎಂಬುದು ಅರ್ಥವಾಗುತ್ತಿದೆ ಎಂದು ದೂರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಪಕ್ಷ ಮುಳುಗಿಸಲು ಹೊರಟವರಿಗೆ ಮನ್ನಣೆ ನೀಡಲಾಗುತ್ತಿದೆ. ಲಕ್ಷಾಂತರ ಕಾರ್ಯಕರ್ತರು ಈಗಲೂ ಬಿಜೆಪಿಗಾಗಿ ದುಡಿಯುತ್ತಿದ್ದಾರೆ ಎಂದು ಕೃಷ್ಣಮೂರ್ತಿ ಪವಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *