ದಾವಣಗೆರೆ: ಅಣ್ಣ ತಮ್ಮಂದಿರ ನಡುವೆ ಜಗಳ ಹಚ್ಚಿ ನೋಡುತ್ತಿರುವ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಉಚ್ಚಾಟಿತ ಪೀಠಾಧಿಪತಿ ವಚನಾನಂದ ಸ್ವಾಮೀಜಿಯನ್ನು ಇಲ್ಲಿಂದ ಓಡಿಸುತ್ತೇವೆ. ನಮ್ಮತ್ರ ಇವರ ಆಟ ನಡೆಯಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಹೆಚ್. ಎಸ್. ನಾಗರಾಜ್ ಗುಡುಗಿದ್ದಾರೆ.
ಹರಿಹರ ಪಂಚಮಸಾಲಿ ಪೀಠದಲ್ಲಿ ಏರ್ಪಡಿಸಿದ್ದ ಲೆಕ್ಕ ಕೊಡಿ ಸಭೆಯಲ್ಲಿ ಪಾಲ್ಗೊಂಡು ವೀರಾವೇಶದ ಮಾತುಗಳನ್ನಾಡಿದ ಹೆಚ್. ಎಸ್. ನಾಗರಾಜ್ ಅವರು ವಚನಾನಂದ ಸ್ವಾಮೀಜಿ ವಿರುದ್ಧ ಬೆಂಕಿಯುಗುಳಿದ್ದಾರೆ.
ಗೊಂದಲ ಆಗಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ. ಆಗಲೇ ನಾವು ಇನ್ನೂ ಗಟ್ಟಿಯಾಗುವುದು. ಸ್ವಾಮೀಜಿ ಹೊರತುಪಡಿಸಿ ನಾವೆಲ್ಲರೂ ಒಂದೇ. ಅಲ್ಲಿ ಕೂಗುತ್ತಿರುವವರು ನಮ್ಮವರೇ, ಇಲ್ಲಿಯವರು ನಮ್ಮವರೇ. ಆ ಸ್ವಾಮೀಜಿಯೇ ಇದಕ್ಕೆಲ್ಲಾ ಕಾರಣ.
ನಮ್ಮ ಅಣ್ಣ ತಮ್ಮಂದಿರ ಹೊಡೆದಾಟಕ್ಕೆ ಹಚ್ಚಿ ನೋಡುತ್ತಿರುವ ಸ್ವಾಮೀಜಿ ಎಂಬ ಪದಕ್ಕೆ ಚ್ಯುತಿ ತರುತ್ತಿದ್ದಾರೆ ಎಂದು ಕೆಂಡಮಂಡಲರಾದರು.
ಸಮಾಜ ಕಟ್ಟಲು ಅವಕಾಶ ಕೊಟ್ಟಿದ್ದೆವು. ಆದರೆ ಈ ಸ್ವಾಮಿಗೆ ಇಷ್ಟು ವರ್ಷ ಇಲ್ಲದ ಹರಿಹರ ತಾಲೂಕಿನ ಜನರ ಮೇಲೆ ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ. ಆ ಸ್ವಾಮಿಗೆ ನಮ್ಮವರೇ ರಕ್ಷಣೆ ನೀಡುತ್ತಿರುವುದು. ಬೇರೆಯವರಲ್ಲ. ನಮ್ಮ ತಮ್ಮಂದಿರು, ಅಳಿಯಂದಿರು, ಚಿಕ್ಕಪ್ಪಂದಿರು ರಕ್ಷಣೆ ಕೊಡುತ್ತಿದ್ದಾರೆ. ಎಲ್ಲರಿಗೂ ಶಿವಪ್ಪನವರು ರಕ್ಷಣೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಸಿರಿಗೆರೆ ನಾಗನಗೌಡರು ಹಿರಿಯರು. ನ್ಯಾಯಕ್ಕೋಸ್ಕರ ನಿಷ್ಠುರವಾಗಿ ಮಾತನಾಡುವವರು ನಮ್ಮ ಜೊತೆಗಿದ್ದಾರೆಂದರೆ ನಾವು ಸರಿಯಿದ್ದೇವೆ ಎಂದರ್ಥ. ಇಲ್ಲದಿದ್ದರೆ ಈ ವೇದಿಕೆ ಮೇಲೆ ಕುಳಿತುಕೊಳ್ಳುತ್ತಿರಲಿಲ್ಲ. ಸಮಾಜದ ಪರವಾಗಿ ಟ್ರಸ್ಟ್ ತೆಗೆದುಕೊಂಡ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಸ್ವಾಮಿಗೆ ಇಲ್ಲಿಯವರೆಗೆ ಸಮಾಜ ಎಲ್ಲಿ ಹೋಗಿತ್ತು? ಪೂಜೆ ಪುನಸ್ಕಾರ ಈಗ ಪ್ರಾರಂಭವಾಗಿದೆ. ವಿಡಿಯೋ ನೋಡಿ ಬಂದರೆ ಸಂದರ್ಶನ ಕೊಡುವ ಕೆಲಸ ಮಾಡುತ್ತಿದ್ದ ಇದೇ ಸ್ವಾಮಿ ರಾಜಕಾರಣಿಗಳು ಬರುತ್ತಾರೆಂದರೆ ಬೇಗನೇ ರೆಡಿ ಆಗಿ ಕುಳಿತುಕೊಳ್ಳುತ್ತಿದ್ದರು. ಸಮಾಜ ಬಾಂಧವರು ಬಂದರೆ ಬಾಗಿಲು ಹಾಕಿಕೊಂಡು ಇಲ್ಲವೆಂದು ಕಳುಹಿಸುತ್ತಿದ್ದರು. ನಾನು ಮಠದೊಳಗೆ ಹೋದಾಗ ಸ್ವಾಮಿ ಅಲ್ಲಿಯೇ ಇದ್ದರು. ಗೊಂದಲ ಸೃಷ್ಟಿ ಮಾಡಬಾರದೆಂದು ಸ್ವಾಮೀಜಿ ಮಾತನಾಡಿಸಬಾರದು ಎಂದು ಸುಮ್ಮನೆ ಬಂದೆ ಎಂದು ತಿಳಿಸಿದರು.
ಚಪ್ಪಲಿ ತೋರಿಸಿದ್ದು ಯಾರಿಗೆ? ಸಿರಿಗೆರೆ ನಾಗನಗೌಡರಿಗೆ, ಶಿವಪ್ಪರಿಗೆ, ಉಮಾಪತಿ ಅವರಿಗೆ, ಸಮಾಜದ ಹಿರಿಯರಿಗೆ ಚಪ್ಪಲಿ ತೋರಿಸಿದ್ದೀರಾ. ಯಾರಿಗೆ ಬೆಂಬಲ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ಪರಿಜ್ಞಾನ ಇಲ್ಲವೇ? ಇಷ್ಟು ದಿನ ಎಲ್ಲಿದ್ದರು? ತಾಲೂಕು ಒಡೆದಿರುವ ಸ್ವಾಮೀಜಿ ಒಡೆದೋಡಿಸುತ್ತೇವೆ. ಲೆಕ್ಕ ಕೇಳಿದ್ದೀರಾ. ಕೊಡಲು ಬಂದಿದ್ದೀವಿ. ಕಾರ್ಯಕ್ರಮ ಅಡ್ಡಿಪಡಿಸಲು ಬಂದಿದ್ದೀರಾ? ಇವೆಲ್ಲಾ ನಡೆಯಲ್ಲ. ಸ್ವಾಮಿ ನಮ್ಮನ್ನು ಒಡೆದು ಹಾಕಿದ್ದು, ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದ್ದಾರೆ.





Leave a comment