ಬೆಂಗಳೂರು: “ನಾನು ಹೆಲಿಕಾಪ್ಟರ್ ನಲ್ಲಿ ಸಮೀಕ್ಷೆ ಮಾಡಿದವನಲ್ಲ. ನನಗೂ ಬುದ್ಧಿ ಇದೆ. ರಾಜ್ಯದಲ್ಲಿ ಬಿ. ಎಸ್. ಯಡಿಯೂರಪ್ಪನವರಿದ್ದಾಗ ಏನೇನಾಯ್ತು ಎಂದು ಈಗ ಬಿಚ್ಚಿ ಹೇಳುವುದಿಲ್ಲ. ಪರಿಷತ್ತಿನಲ್ಲಿ ಸಾಲಮನ್ನಾ ವಿಚಾರ ಬಂದಾಗ ನಾನು ಪ್ರಿಂಟಿಗ್ ಮಷಿನ್ ಇಟ್ಟಿದ್ದೀನಾ ಎಂದು ಕೇಳಿದ್ದ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ. ಅವರ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಳ್ಳುವೆ. 70-80 ಕ್ಷೇತ್ರದ ಶಾಸಕರು ತಮ್ಮ ಜನರ ಪರವಾಗಿ ಧ್ವನಿ ಎತ್ತಿ ಅವರ ವಿಚಾರ ಮಂಡಿಸಲು ಅವಕಾಶ ಮಾಡಿಕೊಟ್ಟಿರುವುದು ಈ ಸರ್ಕಾರದ ಕರ್ತವ್ಯವಲ್ಲವೇ?” ಎಂದು ಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು.
“ಆರ್ಥಿಕತೆ ವಿಚಾರದಲ್ಲಿ ನಾನು ಒಪ್ಪುತ್ತೇನೆ. ಅವರು ಸಲಹೆ ನೀಡಿದ್ದಾರೆ. ಯಡಿಯೂರಪ್ಪನವರ ಸರ್ಕಾರದಲ್ಲಿ ಅವರು ಮಾಡಿದ್ದ ಸಲಹೆಗಳನ್ನು ತಂದು ಓದಲೇ? ನಾನು ಇತಿಹಾಸಕ್ಕೆ ಹೋಗುವುದಿಲ್ಲ. ನನಗೆ ಇತಿಹಾಸ ಓದಲು ಇಷ್ಟವಿಲ್ಲ, ಇತಿಹಾಸ ಸೃಷ್ಟಿ ಮಾಡುವುದು ನನ್ನ ಗುರಿ. ನಾನು ನೀರಾವರಿ ಸಚಿವನಾಗಿದ್ದೆ. ನಮ್ಮ ಇಲಾಖೆಯಲ್ಲಿ 20 ಸಾವಿರ ಕೋಟಿ ಅನುದಾನ ಮಾತ್ರ ಇದೆ. ಆದರೆ ಕಾಮಗಾರಿ ಮಾತ್ರ 1.25 ಲಕ್ಷ ಕೋಟಿಯಷ್ಟು ನಡೆಯುತ್ತಿದೆ. ಈ ಮಧ್ಯೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿi ಮುಳುಗಡೆ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಅದಕ್ಕೆ 70 ಸಾವಿರ ಕೋಟಿ ಬೇಕಾಗಿದೆ. ಬಿಜೆಪಿ ಸರ್ಕಾರ ಎಷ್ಟು ಕೋಟಿ ಹಣದ ಯೋಜನೆ ಕೊಟ್ಟು ಹೋಗಿದ್ದಾರೆ ಎಂದು ಪಟ್ಟಿ ಓದಲೇ?” ಎಂದು ಸವಾಲು ಹಾಕಿದರು.
“ನಾನು ಚುನಾವಣೆಗೂ 6 ತಿಂಗಳು ಮುಂಚಿತವಾಗಿ ನಾನು ಈ ಟೆಂಡರ್ ಗಳನ್ನು ಕೈಗೆತ್ತಿಕೊಳ್ಳಬೇಡಿ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಯೋಜನೆಗಳನ್ನು ವಜಾಗೊಳಿಸಬಹುದಾಗಿತ್ತು. ಇರುವುದು 16 ಸಾವಿರ ಕೋಟಿ ಮಾತ್ರ. ಗುತ್ತಿಗೆದಾರರು ನಮ್ಮ ಶಾಸಕರ ಮೂಲಕ ಭಿಕ್ಷೆ ಬೇಡುವಂತೆ ಕೇಳುತ್ತಿದ್ದಾರೆ. ಆರ್ಥಿಕ ಇಲಾಖೆ ಸಲಹೆ ನೀಡವುದು ಅವರ ಕರ್ತವ್ಯ” ಎಂದರು.
ಅದಾನಿ ಜತೆ ನೀನು ಕೆಲಸ ಮಾಡಿಲ್ಲವೇ ಸುನೀಲ್?
“ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ರಾಜ್ಯದ ಬಜೆಟ್ ಸುಮಾರು 18 ಸಾವಿರ ಕೋಟಿ ಇತ್ತು, ಕೃಷ್ಣಾ ಅವರ ಕಾಲದಲ್ಲಿ ಅದು ಸುಮಾರು 25 ಸಾವಿರ ಕೋಟಿಗೆ ಮುಟ್ಟಿತು. ನಂತರ ಹೆಚ್ಚಿನ ಆದಾಯ ಬಂದು ವರ್ಷಕ್ಕೆ ನಾಲ್ಕುವರೆ ಲಕ್ಷ ಕೋಟಿ ಬಜೆಟ್ ಮಂಡಿಸುತ್ತಿದ್ದೇವೆ. ಕರ್ನಾಟಕ ಆರ್ಥಿಕ ಶಿಸ್ತಿನ ರಾಜ್ಯ. ನಾನು ಇವತ್ತೂ ಸಾಲ ಮಾಡಬಹುದು. ನಾನು ಈಗಷ್ಟೇ ಹಣಕಾಸು ಸಚಿವನಾಗಿದ್ದೇನೆ. ನನಗೆ ಈ ವಿಚಾರದಲ್ಲಿ ಪರಿಣಿತಿ ಇದೆ ಎಂದು ಹೇಳುವುದಿಲ್ಲ. ನಮ್ಮ ಸುನೀಲ್ ಅವರು ಅದಾನಿ ಅವರನ್ನಾದರೂ ಕರೆಯಲಿ, ಬೇರೆಯವರನ್ನಾದರೂ ಕರೆಯಲಿ. ಅದಾನಿ ನಮ್ಮ ಮನೆಗೆ ಬಂದರೋ ಅಥವಾ ನಾನು ಅದಾನಿ ಅವರನ್ನು ಹುಡುಕಿಕೊಂಡು ಹೋಗಿದ್ದೀನಾ? ಅದಾನಿ ಜತೆ ನೀನು ಕೆಲಸ ಮಾಡಿದ್ದೆಯಲ್ಲಪ್ಪಾ. ನಿಮ್ಮ ಕಾಲಲ್ಲೇ ಅನೇಕ ಕಾಮಗಾರಿ ಮಾಡಿದ್ದೀರಿ. ನನಗೆ ಟೀಕೆ ಮಾಡಲು ಇಷ್ಟವಿಲ್ಲ. ಗುತ್ತಿಗೆದಾರರು, ಉದ್ಯಮಿಗಳು ಬರುತ್ತಾರೆ ಹೋಗುತ್ತಾರೆ. ನಮ್ಮ ಯೋಜನೆಗೆ ಜಾಗತಿಕ ಹೂಡಿಕೆದಾರರು ಬರಲಿ ಎಂದು ಅದಕ್ಕೆ ಪ್ರತ್ಯೇಕ ಇಲಾಖೆ ರಚಿಸಲಾಗುತ್ತಿದೆ” ಎಂದು ಹೇಳಿದರು.
ಕೇಂದ್ರದಿಂದ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ
“ಬಂಡವಾಳ ಹೂಡಿಕೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಿರುವುದಕ್ಕೆ, ಪ್ರಪಂಚ ಬೆಂಗಳೂರು ನೋಡುತ್ತಿರುವುದಕ್ಕೆ , ಉದ್ಯೋಗ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಬರುವ ಆದಾಯವನ್ನು ಹಳ್ಳಿಗಳಿಗೆ ಬಳಸುತ್ತಿದ್ದೇವೆ. ಕನಕಪುರ ತಾಲ್ಲೂಕಿನಲ್ಲಿ 100 ಹೆಚ್ ಪಿ ಸಾಮರ್ಥ್ಯದ ಒಂದು ಕೈಗಾರಿಕೆ ಇಲ್ಲ. ಲಗುನಾ ಎಂಬ ಕಾರ್ಖಾನೆ ಬಿಟ್ಟರೆ ಬೇರೆ ಇಲ್ಲ. ಹಾರೋಹಳ್ಳಿ ರಾಮನಗರದಲ್ಲಿ ಇವೆ. ರಾಜ್ಯದ ಬೇರೆ ಭಾಗಗಳಿಂದ ಜನ ಬೆಂಗಳೂರಿಗೆ ವಲಸೆ ಬರುತ್ತಿರುವುದು ಉದ್ಯೋಗ ಹಾಗೂ ಶಿಕ್ಷಣಕ್ಕೆ. ನಾನು ಬೆಂಗಳೂರು ನಗರಕ್ಕೆ ಬಂದಿದ್ದು ಶಿಕ್ಷಣಕ್ಕೆ. ಇಲ್ಲಿನ ಉತ್ತಮ ಹವಾಮಾನ, ಕಾವೇರಿ ನೀರು ನೋಡಿ ವಾಪಸ್ ಹೋಗುತ್ತಿಲ್ಲ. 20 ವರ್ಷಗಳಲ್ಲಿ 70 ಲಕ್ಷ ಜನಸಂಖ್ಯೆ ಹೆಚ್ಚಾಗಿದ್ದು, 45 ಲಕ್ಷ ಜನರು ಹೊರಗಿನಿಂದ ಬಂದು ಕೆಲಸ ಮಾಡುತ್ತಿದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರಿದ್ದಾರೆ. ಇಲ್ಲಿಂದ ಬರುತ್ತಿರುವ ಹಣ ಹೆಚ್ಚು ಹೋಗುತ್ತಿರುವುದು ಕೇಂದ್ರ ಸರ್ಕಾರಕ್ಕೆ. ಇಲ್ಲಿ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ. ರೈತರ ಟ್ರ್ಯಾಕ್ಟರ್ ಗೂ ಜಿಎಸ್ಟಿ” ಎಂದು ಕುಟುಕಿದರು.





Leave a comment