Home ಕ್ರೈಂ ನ್ಯೂಸ್ 44 ಲಕ್ಷ ರೂ. ಇನ್ಶೂರೆನ್ಸ್‌ಗಾಗಿ ಪತ್ನಿಯ ಭೀಕರ ಕೊಲೆ: ಅಪಘಾತವೆಂದು ನಂಬಿಸಲು ಹೋಗಿ 48 ಗಂಟೆಯಲ್ಲಿ ಸಿಕ್ಕಿಬಿದ್ದ ಗಂಡ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

44 ಲಕ್ಷ ರೂ. ಇನ್ಶೂರೆನ್ಸ್‌ಗಾಗಿ ಪತ್ನಿಯ ಭೀಕರ ಕೊಲೆ: ಅಪಘಾತವೆಂದು ನಂಬಿಸಲು ಹೋಗಿ 48 ಗಂಟೆಯಲ್ಲಿ ಸಿಕ್ಕಿಬಿದ್ದ ಗಂಡ!

Share
ಪತ್ನಿ
Share

ಹಮೀರ್‌ಪುರ (ಉತ್ತರ ಪ್ರದೇಶ): ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಮಹಿಳೆಯೊಬ್ಬರ ಸಾವು ಮೊದಲ ನೋಟಕ್ಕೆ ರಸ್ತೆ ಅಪಘಾತ ಎಂದೇ ಭಾವಿಸಲಾಗಿತ್ತು. ಆದರೆ, ಪೊಲೀಸರ ಚಾಣಾಕ್ಷ ತನಿಖೆಯಿಂದ ಕೇವಲ 48 ಗಂಟೆಗಳಲ್ಲಿ ಭೀಕರ ರಹಸ್ಯವೊಂದು ಹೊರಬಿದ್ದಿದೆ. 44 ಲಕ್ಷ ರೂಪಾಯಿ ಇನ್ಶೂರೆನ್ಸ್ ಹಣಕ್ಕಾಗಿ ಪತಿಯೇ ತನ್ನ ಮೂವರು ಸಹಚರರೊಂದಿಗೆ ಸೇರಿ ಪತ್ನಿಯನ್ನು ಹತ್ಯೆಗೈದು, ಅಪಘಾತದ ರೂಪ ನೀಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿ ಅಮರ್ ಸಿಂಗ್ ಹಾಗೂ ಆತನ ಮೂವರು ಸಹಚರರಾದ ಅಮಿತ್ ಗುಪ್ತಾ, ಪುಷ್ಪೇಂದ್ರ ಸೋನಿ ಮತ್ತು ಅಭಯ್ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಥೆ ಬಯಲಾಗಿದ್ದು ಹೇಗೆ?

ಜುಲೈ 29ರ ರಾತ್ರಿ ಹಮೀರ್‌ಪುರ ಜಿಲ್ಲೆಯ ಪೌಧಿಯಾ ಬಳಿ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಹಿಟ್ ಅಂಡ್ ರನ್ ಅಪಘಾತ ಎಂದು ಶಂಕಿಸಲಾಗಿತ್ತು. ಆದರೆ, ಸ್ಥಳದಲ್ಲಿದ್ದ ಬ್ಯಾಂಕ್ ಖಾತೆಯ ಸ್ಲಿಪ್ ಒಂದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಮೃತರನ್ನು 32 ವರ್ಷದ ರೀಟಾ ಎಂದು ಗುರುತಿಸಲಾಯಿತು.

ಮಗಳ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ರೀಟಾ ಅವರ ತಂದೆ ಸರ್ವೇಶ್ ಕುಮಾರ್ ಗುಪ್ತಾ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡರು.

ಡ್ರಾಮವಾಡಿದ್ದ ಪತಿ!

ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ, ಇತ್ತ ಪತಿ ಅಮರ್ ಸಿಂಗ್ ಸುಮೇರ್‌ಪುರ ಪೊಲೀಸ್ ಠಾಣೆಗೆ ತೆರಳಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಮಿಸ್ಸಿಂಗ್ ದೂರು ನೀಡಿದ್ದ. ನಂತರ ರಸ್ತೆ ಬದಿಯಲ್ಲಿ ಮಹಿಳೆಯ ಶವ ಸಿಕ್ಕ ಸುದ್ದಿ ತಿಳಿದು, ತಾನೇ ಬಂದು ಶವವನ್ನು ಗುರುತಿಸಿದ್ದ. ತನಗೇನೂ ತಿಳಿಯದಂತೆ ನಾಟಕವಾಡಿ ಪೊಲೀಸರ ದಾರಿ ತಪ್ಪಿಸಲು ಈ ಪ್ಲಾನ್ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

44 ಲಕ್ಷ ಇನ್ಶೂರೆನ್ಸ್ ಪಾಲಿಸಿ ಮತ್ತು ಸಾಲದ ಸುಳಿ

ರೀಟಾ ಮತ್ತು ಅಮರ್ ಸಿಂಗ್ ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅಮರ್ ಸಿಂಗ್‌ಗೆ ಹಾಗೂ ಆತನ ಸಹಚರರಿಗೆ ಭಾರಿ ಪ್ರಮಾಣದ ಸಾಲವಿತ್ತು. ಸಾಲ ತೀರಿಸಲು ರೀಟಾ ಹೆಸರಿನಲ್ಲಿ 44 ಲಕ್ಷ ರೂ. ಮೌಲ್ಯದ ಇನ್ಶೂರೆನ್ಸ್ ಪಾಲಿಸಿ ಮಾಡಿಸಲಾಗಿತ್ತು. ಬಳಿಕ ಆಕೆಯನ್ನು ಕೊಂದು ಇನ್ಶೂರೆನ್ಸ್ ಹಣ ಪಡೆದು ಹಂಚಿಕೊಳ್ಳಲು ಸಂಚು ರೂಪಿಸಲಾಗಿತ್ತು. ಯೋಜನೆಯಂತೆ ಇನ್ಶೂರೆನ್ಸ್ ಹಣದಲ್ಲಿ ಅಮರ್ ಸಿಂಗ್‌ಗೆ 15 ಲಕ್ಷ ರೂ. ಹಾಗೂ ಉಳಿದ ಹಣವನ್ನು ಸಹಚರರಿಗೆ ಹಂಚಲು ನಿರ್ಧರಿಸಲಾಗಿತ್ತು.

ಅಪಘಾತದ ನಾಟಕವಾಡಿದ್ದು ಹೇಗೆ?

ಯೋಜನೆಯಂತೆ ಅಮರ್ ಸಿಂಗ್, ಪತ್ನಿ ರೀಟಾಳನ್ನು ಪೌಧಿಯಾ ಬಳಿಯ ರಸ್ತೆಗೆ ಕರೆತಂದಿದ್ದ. ಅಲ್ಲಿ ಕಾರಿನಲ್ಲಿ ಕಾಯುತ್ತಿದ್ದ ಆತನ ಸಹಚರರು ಮೊದಲು ರೀಟಾಳಿಗೆ ಕಾರಿನಿಂದ ಗುದ್ದಿದರು. ಇದರಿಂದ ಆಕೆ ರಸ್ತೆ ಬದಿಯ ತಗ್ಗಿಗೆ ಬಿದ್ದಿದ್ದಳು. ಬಳಿಕ ಆಕೆಯನ್ನು ಎಳೆದು ತಂದು ರಸ್ತೆಯ ಮೇಲಿಟ್ಟು, ಆಕೆಯ ಮೇಲೆಯೇ ಕಾರು ಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದರು. ನಂತರ ಘಟನೆಯನ್ನು ಅಪಘಾತವೆಂದು ಬಿಂಬಿಸಿ ಅಲ್ಲಿಂದ ಕಾಲ್ಕಿತ್ತಿದ್ದರು.

ಪೊಲೀಸರ ಕಾರ್ಯಾಚರಣೆಗೆ ಸಿಕ್ಕಿದ ಸಾಕ್ಷಿ

ಸಿಸಿಟಿವಿ ತಾಂತ್ರಿಕ ಕಣ್ಗಾವಲು, ಸ್ಥಳದಲ್ಲಿದ್ದ ಸಾಕ್ಷ್ಯಾಧಾರಗಳು ಮತ್ತು ಸಂಶಯಾಸ್ಪದ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಅಮರ್ ಸಿಂಗ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸಂಪೂರ್ಣ ಕೊಲೆ ಸಂಚು ಬಯಲಾಗಿದೆ. ಕೊಲೆಗೆ ಬಳಸಿದ್ದ ಕಾರು ಹಾಗೂ ಸಿಮ್ ಕಾರ್ಡ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು, ನಾಲ್ವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles