ಉದಯಪುರ (ರಾಜಸ್ಥಾನ): ರಾಜಸ್ಥಾನದ ಉದಯಪುರ ಮೂಲದವರಾಗಿದ್ದು, ಸೂರತ್ನಲ್ಲಿ ಸುಮಾರು 15 ಕೋಟಿ ರೂ. ವಾರ್ಷಿಕ ವಹಿವಾಟಿನ ಜವಳಿ ವ್ಯವಹಾರ ನಡೆಸುತ್ತಿದ್ದ ಕುಟುಂಬವೊಂದು ಲೌಕಿಕ ಜೀವನವನ್ನು ತೊರೆದು ಜೈನ ಸನ್ಯಾಸತ್ವ (ದೀಕ್ಷೆ) ಸ್ವೀಕರಿಸಲು ನಿರ್ಧರಿಸಿದೆ.
ದಿಲೀಪ್ ಭಾಯ್ ಭೋಗರ್ (47), ಅವರ ಪತ್ನಿ ಜ್ಯೋತಿ ಬೆನ್ (45) ಹಾಗೂ ಇಬ್ಬರು ಪುತ್ರಿಯರಾದ ಛವಿ (22) ಮತ್ತು ಚಾರ್ವಿ (14) ಅವರು 2027ರ ಫೆಬ್ರವರಿ 8 ರಂದು ಸೂರತ್ನಲ್ಲಿ ದೀಕ್ಷೆ ಪಡೆಯಲಿದ್ದಾರೆ.
ದಿಲೀಪ್ ಭಾಯ್ ಅವರು ಸಣ್ಣದಾಗಿ ಆರಂಭಿಸಿದ್ದ ಬಟ್ಟೆ ವ್ಯಾಪಾರವನ್ನು ಬೆಳೆಸಿ ಮೂರು ಅಂಗಡಿಗಳು ಮತ್ತು ಯಂತ್ರಗಳನ್ನು ಒಳಗೊಂಡ ದೊಡ್ಡ ಜವಳಿ ಉದ್ಯಮವನ್ನಾಗಿ ರೂಪಿಸಿದ್ದರು.
ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಯೋಚನೆಯಲ್ಲಿದ್ದಾಗ ಜೈನ ಆಚಾರ್ಯರ ಭೇಟಿಯ ನಂತರ ಅವರ ಜೀವನದ ದೃಷ್ಟಿಕೋನವೇ ಬದಲಾಯಿತು.
2023 ರಲ್ಲಿ ಅವರ ಹಿರಿಯ ಮಗಳು ಶೈಲಿ ಈಗಾಗಲೇ ದೀಕ್ಷೆ ಪಡೆದು ಸಾಧ್ವಿ ದರ್ಶಿತಾ ಆಗಿದ್ದು, ಪ್ರೇರಣೆಯಿಂದ ಇಡೀ ಕುಟುಂಬವೇ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಕೋಟಿಗಳ ವ್ಯವಹಾರತ್ಯಾಗ: ವಾರ್ಷಿಕ 15 ಕೋಟಿ ರೂ. ವಹಿವಾಟು ನಡೆಸುತ್ತಿದ್ದ ಯಶಸ್ವಿ ಜವಳಿ ಉದ್ಯಮವನ್ನು ಕೈಬಿಟ್ಟು, ಕುಟುಂಬದ ನಾಲ್ವರು ಸದಸ್ಯರು ಸಂಪೂರ್ಣವಾಗಿ ಆಧ್ಯಾತ್ಮಿಕ ಹಾಗೂ ಸನ್ಯಾಸ ಜೀವನಕ್ಕೆ ಅಡಿಯಿಡುತ್ತಿದ್ದಾರೆ.
ಕುಟುಂಬದ ವಿವರ: ದಿಲೀಪ್ ಭಾಯ್, ಪತ್ನಿ ಜ್ಯೋತಿ ಬೆನ್ ಹಾಗೂ ಹೆಣ್ಣುಮಕ್ಕಳಾದ ಬಿಬಿಎ ಪದವೀಧರೆ ಛವಿ ಮತ್ತು 9ನೇ ತರಗತಿ ಓದುತ್ತಿದ್ದ, ಜಿಲ್ಲಾ ಮಟ್ಟದ ಫುಟ್ಬಾಲ್ ಆಟಗಾರ್ತಿ ಚಾರ್ವಿ ದೀಕ್ಷೆ ಪಡೆಯಲಿದ್ದಾರೆ.
ಕಠಿಣ ನಿಯಮಗಳ ಪಾಲನೆ: ದೀಕ್ಷೆಗೂ ಮುನ್ನ ಈ ನಾಲ್ವರು ಜೈನ ಸನ್ಯಾಸಿಗಳೊಂದಿಗೆ ಸಮಯ ಕಳೆದು, ಕಾಲ್ನಡಿಗೆಯ ಪಯಣ, ಆಹಾರ ನಿಯಮಗಳು ಹಾಗೂ ದೈನಂದಿನ ಕಠಿಣ ಆಚರಣೆಗಳ ಬಗ್ಗೆ ತರಬೇತಿ ಪಡೆದಿದ್ದಾರೆ.
ಉದ್ಯಮ ಮತ್ತು ಐಷಾರಾಮಿ ಜೀವನವನ್ನು ತ್ಯಜಿಸಿ ಇಡೀ ಕುಟುಂಬವೊಂದು ಜೈನ ದೀಕ್ಷೆ ಸ್ವೀಕರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.




