Home ಕ್ರೈಂ ನ್ಯೂಸ್ ಕುಲ್ಗಾಮ್ ಎನ್‌ಕೌಂಟರ್: ಭದ್ರತಾ ಪಡೆಗಳ ಬಲೆಗೆ ಬಿದ್ದ ಲಷ್ಕರ್ ಕಮಾಂಡರ್ ಲತೀಫ್ ಭಟ್; ವಿಡಿಯೋ ಕರೆಯಲ್ಲಿ ಉಗ್ರ ಹೇಳಿದ್ದೇನು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕುಲ್ಗಾಮ್ ಎನ್‌ಕೌಂಟರ್: ಭದ್ರತಾ ಪಡೆಗಳ ಬಲೆಗೆ ಬಿದ್ದ ಲಷ್ಕರ್ ಕಮಾಂಡರ್ ಲತೀಫ್ ಭಟ್; ವಿಡಿಯೋ ಕರೆಯಲ್ಲಿ ಉಗ್ರ ಹೇಳಿದ್ದೇನು?

Share
ಕುಲ್ಗಾಮ್
Share

ಕುಲ್ಗಾಮ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭಾರಿ ಗುಂಡಿನ ಚಕಮಕಿ ಆರಂಭವಾಗಿದ್ದು, ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಪ್ರಮುಖ ಕಮಾಂಡರ್ ಲತೀಫ್ ಭಟ್‌ನನ್ನು ಮಸೀದಿಯೊಂದರಲ್ಲಿ ಸುತ್ತುವರಿಯಲಾಗಿದೆ. ಕಾರ್ಯಾಚರಣೆಯ ವೇಳೆ ಭದ್ರತಾ ಸಿಬ್ಬಂದಿ ವಿಡಿಯೋ ಕರೆ ಮೂಲಕ ಉಗ್ರನನ್ನು ಸಂಪರ್ಕಿಸಿ ಶರಣಾಗುವಂತೆ ಮನವಿ ಮಾಡಿದ್ದಾರೆ.

“ನಾವು ನಿನ್ನೊಂದಿಗಿದ್ದೇವೆ, ಶರಣಾಗು” ಎಂದು ಅಧಿಕಾರಿಯೊಬ್ಬರು ವಿಡಿಯೋ ಕರೆಯಲ್ಲಿ ಮನವಿ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಶರಣಾಗಲು ನಿರಾಕರಿಸಿದ ಭಟ್, “ನನಗೆ ಅಲ್ಲಾಹನನ್ನು ಭೇಟಿಯಾಗಬೇಕು, ನಾನು ತುಂಬಾ ಸಂತೋಷವಾಗಿದ್ದೇನೆ, ಅಲ್ಲಾಹನನ್ನು ಹೊರತುಪಡಿಸಿ ನನ್ನೊಂದಿಗೆ ಯಾರೂ ಇಲ್ಲ” ಎಂದು ಉತ್ತರಿಸಿದ್ದಾನೆ. ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಈತನ ಸಹಚರ ಉಮರ್ ನಿಸಾರ್ ದಾರ್ ಹತನಾಗಿದ್ದು, ಗಾಯಗೊಂಡಿದ್ದ ಲತೀಫ್ ಭಟ್ ಅಲ್ಲಿಂದ ಪರಾರಿಯಾಗಿದ್ದನು.

ದಾಳಿಗಳ ರೂವಾರಿ: ನವೆಂಬರ್ 11 ರಂದು ಅಖ್ರಾನ್‌ನ ಸಿಆರ್‌ಪಿಎಫ್ (CRPF) ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಈ ದಾಳಿಗೂ ಮುನ್ನ ನವೆಂಬರ್ 10 ರಂದು ಭಟ್ ಮತ್ತು ದಾರ್ ವಿವಿಧೆಡೆ ರೆಕ್ಕಿ ನಡೆಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಮಂಗಳವಾರ ಬಿಡುಗಡೆ ಮಾಡಿದ್ದರು.

ಹಳೆಯ ಪ್ರಕರಣಗಳಲ್ಲಿ ಭಾಗಿ: ಜುಲೈ 22 ರಂದು ಅನಂತನಾಗ್‌ನಲ್ಲಿ ಪೊಲೀಸ್ ಸಿಬ್ಬಂದಿಯ ಹತ್ಯೆ ಹಾಗೂ ಆಗಸ್ಟ್ 1 ರಂದು ಕುಲ್ಗಾಮ್‌ನಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಪ್ರಕರಣದಲ್ಲೂ ಲತೀಫ್ ಭಟ್ ಭಾಗಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ವ್ಯಾಪಕ ಶೋಧ ಕಾರ್ಯಾಚರಣೆ: ಹತನಾದ ಉಗ್ರ ಉಮರ್ ನಿಸಾರ್ ದಾರ್ ಕಳೆದ ಆರು ತಿಂಗಳಿಂದ ಭಟ್‌ಗೆ ಆಶ್ರಯ ನೀಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕುಲ್ಗಾಮ್ ದಾಳಿಯ ಬಳಿಕ ಭದ್ರತಾ ಪಡೆಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದು, ವಿಚಾರಣೆಗಾಗಿ 500ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿವೆ.

ಪ್ರಸ್ತುತ ಕುಲ್ಗಾಮ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಬೆಳಗಿನ ಜಾವದಿಂದಲೂ ಗುಂಡಿನ ಸದ್ದು ಕೇಳಿಬರುತ್ತಿದೆ. ಉಗ್ರನನ್ನು ಜೀವಂತವಾಗಿ ಸೆರೆಹಿಡಿಯಲು ಅಥವಾ ಹತ್ತಿಕ್ಕಲು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Share