ಭೋಪಾಲ್: ನೋಯ್ಡಾ ಮೂಲದ 31 ವರ್ಷದ ಮಹಿಳೆ ಟ್ವಿಶಾ ಶರ್ಮಾ ಅವರ ನಿಗೂಢ ಸಾವು ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಲು ಮಧ್ಯಪ್ರದೇಶ ಸರ್ಕಾರ ಅಧಿಕೃತವಾಗಿ ಶಿಫಾರಸು ಮಾಡಿದೆ.
ಟ್ವಿಶಾ ಶರ್ಮಾ ಭೋಪಾಲ್‌ನಲ್ಲಿರುವ ತಮ್ಮ ಪತಿಯ ಮನೆಯ ಟೆರೇಸ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಇದು ಆತ್ಮಹತ್ಯೆ ಎಂದು ಭೋಪಾಲ್ ಪೊಲೀಸ್ ಕಮಿಷನರ್ ತಿಳಿಸಿದ್ದಾರಾದರೂ, ಟ್ವಿಶಾ ಅವರ ಕುಟುಂಬಸ್ಥರು ಇದು ವರದಕ್ಷಿಣೆ ಕಿರುಕುಳ ಮತ್ತು ತೀವ್ರ ಮಾನಸಿಕ ಹಿಂಸೆಯಿಂದ ನಡೆದ ಸಾವು ಎಂದು ಆರೋಪಿಸಿದ್ದಾರೆ. ಅಲ್ಲದೆ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕೆಂದು ಪಟ್ಟು ಹಿಡಿದಿದ್ದರು.
ಕುಟುಂಬದ ನಿರಂತರ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಸರ್ಕಾರ, ದೆಹಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯ್ದೆ 1946 ರ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಒಪ್ಪಿಗೆ ನೀಡಿದೆ. ಅಪರಾಧಕ್ಕೆ ಪ್ರಚೋದನೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಎಲ್ಲಾ ಆಯಾಮಗಳಿಂದ ಸಿಬಿಐ ಈ ಪ್ರಕರಣದ ತನಿಖೆ ನಡೆಸಲಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಕೃಷ್ಣವೇಣಿ ದೇಶವತು ಸಹಿ ಮಾಡಿರುವ ಈ ಆದೇಶದ ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಹಾಗೂ ಸಿಬಿಐ ನಿರ್ದೇಶಕರಿಗೆ ರವಾನಿಸಲಾಗಿದೆ.





Leave a comment