SUDDIKSHANA KANNADA NEWS/ DAVANAGERE/ DATE:20-12-2024
ದಾವಣಗೆರೆ: ಸತ್ಯಕ್ಕೆ ಕೊನೆಗೂ ಜಯ ಸಿಕ್ಕಿದೆ. ನಾವು ಕಾಂಗ್ರೆಸ್ ಸರ್ಕಾರದ ಗೊಡ್ಡು ಬೆದರಿಕೆಗೆ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಘೋಷಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ನಡೆದುಕೊಂಡ ರೀತಿ ಅಸಹ್ಯ ಎನಿಸುತ್ತದೆ. ಇಂಥ ಸರ್ಕಾರವನ್ನು ನಾನು ಜೀವಮಾನದಲ್ಲಿಯೇ ನೋಡಿಲ್ಲ ಎಂದು ಗುಡುಗಿದರು.
ನನ್ನನ್ನು ಬಂಧಿಸಿದ ಬಳಿಕ ಬೆಳಗಾವಿ ಪೊಲೀಸರು ಮೂರು ಜಿಲ್ಲೆಗಳಲ್ಲಿ ಸುತ್ತಾಡಿಸಿದರು. ನನ್ನ ಮಾತಿಗೆ ಬೆಲೆಯನ್ನೇ ಕೊಡಲಿಲ್ಲ. ನಾನು ಕೊಟ್ಟ ದೂರನ್ನು ಸ್ವೀಕರಿಸಲಿಲ್ಲ. ಹನ್ನೊಂದು ಗಂಟೆಗೂ ಹೆಚ್ಚು ಕಾಲ ಅಲೆದಾಡಿಸಿ ಮಾನಸಿಕವಾಗಿ ಕುಗ್ಗಿಸುವಂಥ ಪ್ರಯತ್ನ ಮತ್ತು ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಉಪಯೋಗಿಸಿಕೊಂಡು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನು ಬಂಧಿಸಿದಾಗಿನಿಂದಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಸಾಮಾನ್ಯ ಕಾರ್ಯಕರ್ತರು, ಮುಖಂಡರು ಆತ್ಮಸ್ಥೈರ್ಯ ತುಂಬಿದ್ದಾರೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸತ್ಯಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಪೊಲೀಸ್ ಬಲ ಬಳಸಿಕೊಂಡು ಕುಗ್ಗಿಸುವ ಕೆಲಸಕ್ಕೆ ಹೆದರಲ್ಲ. ನಿನ್ನೆ ಪ್ರಯೋಗ ಮಾಡಿದಂತೆ ಬಿಜೆಪಿಯವರು 35 ವರ್ಷದಿಂದ ಕಷ್ಟ ಅನುಭವಿಸಿದ್ದೇವೆ. ಇದೇನೂ ಹೊಸದೇನಲ್ಲ. ಸಂಕಷ್ಟದಿಂದ ಮೇಲೆದ್ದು ಬಂದಿದ್ದೇವೆ. ನೀವು ಕೊಡುವ ತೊಂದರೆ ಮತ್ತಷ್ಟು ಶಕ್ತಿ ನೀಡುತ್ತದೆ ಎಂದು ಸಿ. ಟಿ. ರವಿ ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ, ಶಾಸಕ ಬಿ. ಪಿ. ಹರೀಶ್, ವೀರೇಶ್ ಹನಗವಾಡಿ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಮತ್ತಿತರರು ಹಾಜರಿದ್ದರು.