SUDDIKSHANA KANNADA NEWS/ DAVANAGERE/ DATE:08-02-2024
ದಾವಣಗೆರೆ: ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ ಮಾಡಲು ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸಬೇಕು ಎಂದು ಜಿಲ್ಲಾ ಕಸಾಪ ಆಗ್ರಹಿಸಿದೆ.
ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ರವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಅವರು 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಬೇಕೆಂಬ ಮತ್ತು ಅದಕ್ಕೆ ಬೇಕಾಗುವ ಅನುದಾನವನ್ನು ತಾವು ಮಂಡಿಸಲಿರುವ ಆಯವ್ಯಯದಲ್ಲಿ ಕಾಯ್ದಿರಿಸಬೇಕೆಂಬ ಮನವಿ ಪತ್ರವನ್ನು ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಾವು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಾನೂ ಸಹ ಆಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ದಾವಣಗೆರೆ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವ ತೀರ್ಮಾನವನ್ನು ಅಂದಿನ ಸಚಿವ ಸಂಪುಟದಲ್ಲಿ ತೆಗೆದುಕೊಂಡು ಆ ಸಮ್ಮೇಳನಕ್ಕಾಗಿ ಆಯವ್ಯಯದಲ್ಲಿ 30 ಕೋಟಿ ಹಣವನ್ನು ಘೋಷಿಸಿ ಆದೇಶ ನೀಡಿದ್ದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು ಎಂದು ವಾಮದೇವಪ್ಪ ಈ ಸಂದರ್ಭದಲ್ಲಿ ಪುನಃ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಸಿದ್ಧರಾಮಯ್ಯನವರು ಕನ್ನಡ, ನಾಡು, ನುಡಿ, ಸಾಹಿತ್ಯ, ಕಲೆ, ಜಾನಪದ ಹಾಗೂ ಕನ್ನಡ ಸಂಸ್ಕೃತಿಯನ್ನು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಡೆಯಲಿರುವ 3ನೇ ವಿಶ್ವ ಕನ್ನಡ ಸಮ್ಮೇಳನದ ಮೂಲಕ ಇಡೀ
ವಿಶ್ವ ಕನ್ನಡಿಗರ ಗಮನ ಸೆಳೆಯುವುದಕ್ಕಾಗಿ 3ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಬೇಕಾಗುವ ಅನುದಾನವನ್ನು ಘೋಷಿಸುತ್ತಾರೆಂಬ ನಮ್ಮ ಅಗಾಧ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನುಡಿದಂತೆ ನಡೆಯುವ ಮುಖ್ಯಮಂತ್ರಿಗಳೆಂದೇ ಖ್ಯಾತರಾಗಿರುವ ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿಯೇ 2024-25ನೇ ಸಾಲಿನಲ್ಲಿ ತಮ್ಮ ನೇತೃತ್ವದಲ್ಲಿ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ರ ಮಾರ್ಗದರ್ಶನದಲ್ಲಿ ನಡೆಸಲು ಅನುವು ಮಾಡಿಕೊಟ್ಟು ಕನ್ನಡಿಗರ ಪ್ರೀತಿ, ವಿಶ್ವಾಸಕ್ಕೆ ಭಾಜನರಾಗುವ ಅಚಲ ವಿಶ್ವಾಸ ನಮ್ಮದಾಗಿದೆ ಎಂದು ವಾಮದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.