SUDDIKSHANA KANNADA NEWS/ DAVANAGERE/ DATE:17-02-2024
ಬಾಗಲಕೋಟೆ: ರಂಭಾಪುರಿ ಶ್ರೀಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ.
ಪಂಚಗೃಹ ಗುರುಲಿಂಗೇಶ್ವರ ಮಠದ ವಿವಾದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಕಲ್ಲು ತೂರಾಟ ನಡೆಸಿದ್ದಾರೆ. ಶ್ರೀಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಮಹಾಸ್ವಾಮೀಜಿ ಕಾರು ಹೋಗುವಾಗ ಅಡ್ಡಗಟ್ಟಿದ್ದ ಕೆಲವರು ಪ್ರತಿಭಟನೆ ನಡೆಸಲು ಮುಂದಾದರು. ಕಾರಿಗೆ ಅಡ್ಡ ಹಾಕಲು ಮುಂದಾದರು. ಮಾತ್ರವಲ್ಲ, ರಂಭಾಪುರಿ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ನಿರತರಾದ ಮಹಿಳೆಯೊಬ್ಬರ ಚಪ್ಪಲಿ ಎಸೆದ ವಿಡಿಯೋ ವೈರಲ್ ಆಗಿದೆ. ಪಂಚಗೃಹ ಗುರುಲಿಂಗೇಶ್ವರ ಮಠದ ವಿವಾದ ಕೋರ್ಟ್ ನಲ್ಲಿದೆ. ಈಗಲೇ ಅಭಿವೃದ್ಧಿ ಮಾಡುವುದು, ಜಮೀನು ಉಳುಮೆ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ತಳ್ಳಾಟ, ನೂಕಾಟ, ಮಾತಿನ ಚಕಮಕಿಯೂ ನಡೆಯಿತು. ಗಂಗಾಧರ ಸ್ವಾಮೀಜಿ ಅವರು ಮಠದ ಅಭಿವೃದ್ಧಿ ಹಾಗೂ ಉಳುಮೆ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೋರ್ಟ್ ತೀರ್ಪು ಬಂದ ಬಳಿಕ ಕೈಗೊಳ್ಳಲಿ. ಈಗಲೇ ಯಾಕೆ ಮಾಡಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಮಹಾಸ್ವಾಮೀಜಿ ಪಂಚಗೃಹ ಗುರುಲಿಂಗೇಶ್ವರ ಸ್ವಾಮಿ ಮಠದ ಅಭಿವೃದ್ಧಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ವಿವಾದ ಕೋರ್ಟ್ ನಲ್ಲಿದೆ. ತೀರ್ಪಿಗೆ ಸ್ವಾಗತ ಮಾಡುತ್ತೇವೆ. ಮಠದ ದುರಸ್ತಿ ಮಾಡಿದರೆ ಒಳ್ಳೆಯದು ಅಲ್ಲವೇ? ರಂಭಾಪುರಿ ಮಠದ ಶಾಖಾ ಮಠದಲ್ಲಿ ಅಭಿವೃದ್ಧಿ ಹಾಗೂ ಪೂಜೈ ಕೈಂಕರ್ಯಗಳು ನಡೆಯುವಂತಾಗಬೇಕು ಎಂಬ ಸದುದ್ದೇಶದಿಂದ ಕೈಗೊಂಡಿದ್ದಾರೆ. ಕಲಾದಗಿ ಮಾರ್ಗದಲ್ಲಿ ಹೋಗುವಾಗ ಅಡ್ಡಗಟ್ಟಿದ್ದಾರೆ. ನಾವು ಕೆಲವರಿಗೆ ಗೌರವ ಕೊಟ್ಟಿದ್ದೇ ಇದಕ್ಕೆಲ್ಲಾ ಕಾರಣ. ನಾವು ಗೌರವ ನೀಡಬಾರದಿತ್ತು ಎಂದು ಹೇಳಿದ್ದಾರೆ.
ಅಭಿವೃದ್ಧಿ ಮಾಡಿದರೆ ಒಳ್ಳೆಯದು, ನ್ಯಾಯಾಲಯ ತೀರ್ಪಿಗೆ ಬದ್ಧ. ಅಭಿವೃದ್ಧಿಗೆ ಕುಂಠಿತ ಮಾಡುವುದು ಸರಿಯಲ್ಲ. ಕೆಡಿಸುವವರು ಎಲ್ಲಾ ಕಡೆ ಇರುತ್ತಾರೆ. ಶಾಖಾ ಮಠ ಆಗಿರುವುದರಿಂದ ಅಭಿವೃದ್ಧಿ ಮಾಡಬೇಕಿದೆ. ಬೇರೆ ಸ್ವಾಮೀಜಿಗಳಿಗೆ
ನಾವು ಪುರಸ್ಕಾರ ಕೊಟ್ಟಿದ್ದೇ ಈ ಸಮಸ್ಯೆಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.