SUDDIKSHANA KANNADA NEWS/ DAVANAGERE/ DATE:11-01-2025
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರಿಗೆ ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದು, ಅಭಿನೇತ್ರಿಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಬೆದರಿಕೆ ಹಾಕಲಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಬಳಿಕ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದರು. ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ, ಎಲ್ಲಿದ್ದಾರೋ ಅಲ್ಲಿಯೇ ಬಿಡುಗಡೆ ಮಾಡುವಂತೆ ಜಾಮೀನು ಮಂಜೂರು ಮಾಡಿತ್ತು.
ಆ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಈ ವಿಚಾರ ಇಲ್ಲಿಗೆ ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಅವರಿಗೂ ದೂರು ನೀಡುವುದಾಗಿ ತಿಳಿಸಿದ್ದರು. ರಾಜ್ಯಪಾಲರು ಸಹ ಈ ಪ್ರಕರಣದಲ್ಲಿ ಎಂಟ್ರಿ ಆಗಿದ್ದರು. ಸಿಐಡಿ
ವಿಚಾರಣೆಯನ್ನೂ ಸಿ. ಟಿ. ರವಿ ಎದುರಿಸಿದ್ದರು. ಈಗ ಸಿ. ಟಿ. ರವಿ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ಇದಕ್ಕೆಲ್ಲಾ ಹೆದರುವವನು ನಾನಲ್ಲ ಎಂದು ಸಿ. ಟಿ. ರವಿ ಹೇಳಿದ್ದಾರೆ.
ಈ ಪತ್ರ ಎಲ್ಲಿಂದ ಬಂದಿದೆ ಎಂಬುದು ಗೊತ್ತಿಲ್ಲ. ಈ ವಿಚಾರ ಸಂಬಂಧ ಪೊಲೀಸರಿಗೆ ದೂರು ನೀಡುತ್ತೇನೆ. ಅಭಿನೇತ್ರಿ ಯಾರು ಎಂಬ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿಲ್ಲ. ಪೊಲೀಸರು ತನಿಖೆ ನಡೆಸಿ ಆರೋಪಿ ಪತ್ತೆ ಹಚ್ಚಬೇಕು ಎಂದು
ಸಿಟಿ ರವಿ ಒತ್ತಾಯಿಸಿದ್ದಾರೆ.