SUDDIKSHANA KANNADA NEWS/ DAVANAGERE/ DATE:07-02-2024
ಬೆಂಗಳೂರು: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿ.ಎ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಸವಾಲು ಹಾಕಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರ ಪಕ್ಷ ಸೇರ್ಪಡೆಯಾದ ನಂತರ ಅವರು ಮಾಧ್ಯಮದವರ
ಜೊತೆ ಮಾತನಾಡಿದರು.
ಯುಪಿಎ ಅವಧಿಯಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಎನ್ ಡಿಎ ಸಮಯದಲ್ಲಿ ಕರ್ನಾಟಕಕ್ಕೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ
ಎಂಬುದರ ಕುರಿತು ಸಾರ್ವಜನಿಕ ಚರ್ಚೆಗೆ ಸಿದ್ದ ಎಂದು ಹೇಳಿದರು.
ದೆಹಲಿಯಲ್ಲಿ ನಡೆದಿರುವುದು ಪ್ರತಿಭಟನೆಯಲ್ಲ. ಅದು ಕಾಂಗ್ರೆಸ್ ಕೃಪಾ ಪೋಷಕ ಪ್ರತಿಭಟನೆ. ದೆಹಲಿಯಲ್ಲಿ ಕರ್ನಾಟಕದ ಮಾನ ಮಾರ್ಯಾದೆ ಕಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.
ಶಿವಕುಮಾರ್ ಅವರುಗಳು ರಾಜ್ಯದ ಜನತೆಯ ಕ್ಷೆಮೆ ಕೇಳಬೇಕು ಎಂದು ಒತ್ತಾಯ ಮಾಡಿದರು.
ಸಂಸದ ಡಿ.ಕೆ.ಸುರೇಶ್ ಅವರು ದೇಶವಿಭಜನೆ ಹೇಳಿಕೆ ಕೊಟ್ಟ ನಂತರ ಉಂಟಾಗಿದ್ದ ಹಾನಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ. ಇದು ವಿಷಯಾಂತರ ಮಾಡುವ ಹುನ್ನಾರ ಎಂದು ಕಿಡಿಕಾರಿದರು.
ಒಂದು ಕಡೆ ರಾಹುಲ್ ಗಾಂಧಿಯವರು ಭಾರತ್ ಜೋಡು ಯಾತ್ರೆ ಮಾಡುತ್ತಾರೆ. ಅವರದೇ ಪಕ್ಷದ ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ದೇಶ ವಿಭಜನೆಯ ಹೇಳಿಕೆ ಕೊಡುತ್ತಿದ್ದಾರೆ. ಇವರ ಮೇಲೆ
ಪಕ್ಷ ಇನ್ನು ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಯವರು ಯಾವ ಉದ್ದೇಶಕ್ಕಾಗಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೋ ಗೊತ್ತಿಲ್ಲ. ಅಷ್ಟಕ್ಕೂ ದೇಶ ವಿಭಜನೆಯಾಗಿದಿಯೇ ಎಂದು ಪ್ರಶ್ನೆ ಮಾಡಿದರು.
ಮೊದಲು ದೇಶ ವಿಭಜನೆಯ ಹೇಳಿಕೆ ನೀಡಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇನ್ನು ಮುಂದೆ ಇಂತಹ ಹೇಳಿಕೆ ನೀಡುವವರು ಯಾರೇ ಆದರೂ ಅಂತಹವರನ್ನು ನೇಣಿಗೆ ಹಾಕಲಿ ಎಂದು ರೇಣುಕಾಚಾರ್ಯ
ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಯುವನಾಯಕ ರಾಜ್ಯಾಧ್ಯಕ್ಷ ಆದಮೇಲೆ 10 ಸಾವಿರ ಕಿಲೋಮೀಟರ್ ಪ್ರವಾಸ ಮಾಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ಬಿಜೆಪಿ ಯನ್ನು ಬಲಿಷ್ಠವಾಗಿ ಸಂಘಟನೆ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಕೈ
ಬಲಪಡಿಸಬೇಕು.ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಮಾಡಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ಮುಂಬರುವ ಲೋಕಸಭೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕು. ರಾಜ್ಯದಿಂದ 28 ಸಂಸದರು ಆಯ್ಕೆ ಮಾಡಬೇಕು ಎಂದು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿದ್ದಾರೆ ಎಂದು ಪ್ರಶಂಸಿದರು.