SUDDIKSHANA KANNADA NEWS/ DAVANAGERE/ DATE:04-12-2024
ದಾವಣಗೆರೆ: ಬಿಜೆಪಿಯಲ್ಲಿನ ರಾವಣ, ಮಹಿಷಾಸುರ ಮರ್ದನ ಆಗಬೇಕು. ನಮಗೆ ಸಂಧಾನ ಆಗುವುದಕ್ಕಿಂತ ಸಂಹಾರ ಆಗಬೇಕೆಂದು ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ರಾವಣ, ಮಹಿಷಾಸುರರ ಹಾವಳಿ ಹೆಚ್ಚಾಗಿದೆ. ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದೇವೆ. ಚಾಮುಂಡೇಶ್ವರಿ ತಾಯಿ ಹೇಗೆ ಮಹಿಷಾಸುರನ ಮರ್ದನ ಮಾಡಿದೆಯೋ ಅದೇ ರೀತಿಯಲ್ಲಿ ಮಹಿಷಾಸುರರು ಹಾಗೂ ರಾವಣನ ಸಂಹಾರ ಮಾಡುವಂತೆ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ದುಷ್ಟರು ತಂದೆ ತಾಯಿ ಮೇಲೆ ಆಣೆ ಮಾಡಿದ್ದೇ ಅವರಿಗೆ ಈಗ ಶಾಪವಾಗಿ ಕಾಡುತ್ತಿದೆ. ಜಿಲ್ಲೆಯ ಜನರಿಗೆ ನೀವೇನು ಎಂಬುದು ಗೊತ್ತು. ಜೋರಾಗಿ ಅವರಿಗಷ್ಟೇ ಅಲ್ಲ ನಮಗೂ ಮಾತನಾಡಲು ಬರುತ್ತದೆ. ಹೈಕಮಾಂಡ್ ಮುಂದೆ ನಾವೂ ಮಾತನಾಡುತ್ತೇವೆ. ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿದರೆ ಹಿಂದೆ ಓಡಾಡುವವರಿಗೆ ಕಷ್ಟ ಆಗುತ್ತದೆ. ಹಾಗಾಗಿಯೇ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವೃಥಾ ಆರೋಪ ಮಾಡ್ತೀರಾ. ಅನ್ಯಾಯ ಆಗಿದ್ದರೆ, ಅವಶ್ಯಕತೆ ಇದ್ದರೆ ಹೈಕಮಾಂಡ್ ಬಳಿ ಹೇಳಿ. ಇನ್ನೊಬ್ಬರ ಬಗ್ಗೆ ಆಟವಾಡಿದವರು ಏನಾಗಿದ್ದಾರೆ ಎಂದು ಇತಿಹಾಸದಿಂದ ತಿಳಿದಿದೆ. ಮಾಡಬಾರದ್ದನ್ನು ಮಾಡಿ ಬಂದರೆ, ಹೊಂದಾಣಿಕೆ ಮಾಡಿಕೊಂಡು ಸೋಲಿಸಿದವರನ್ನು ಬಿಜೆಪಿ ಕಾರ್ಯಕರ್ತರು ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದರು.
ಎಲ್ಲಾ ಬೆಳವಣಿಗೆಯನ್ನು ಪಕ್ಷವು ಗಮನಿಸುತ್ತಿದೆ. ಯತ್ನಾಳ್ ಉಚ್ಚಾಟನೆಗೆ 36 ಜಿಲ್ಲಾಧ್ಯಕ್ಷರು ಮನವಿ ಮಾಡಿ ಪತ್ರ ಬರೆದಿದ್ದಾರೆ. ಪಕ್ಷ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಾತಿ ಗುರಾಣಿ, ಹಿಂದುತ್ವದ ಗುರಾಣಿ ಹಿಡಿದಿದ್ದಾರೆ.
ವಿಚಿತ್ರವಾದ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಅನಿಷ್ಟಕ್ಕೆಲ್ಲಾ ಶನೀಶ್ವರ ಕಾರಣ ಎಂಬಂತೆ ಯಡಿಯೂರಪ್ಪ, ವಿಜಯೇಂದ್ರರ ಮೇಲೆ ಆರೋಪ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.
ತಪ್ಪು ನಡೆದರೆ ಹೊಂದಿಸಿಕೊಳ್ಳುವ ವ್ಯಕ್ತಿತ್ವ ಯಡಿಯೂರಪ್ಪ, ವಿಜಯೇಂದ್ರ ಅವರಿಗಿದೆ. ಕಾರ್ಯಕರ್ತರಿಗೆ ಯಡಿಯೂರಪ್ಪ, ವಿಜಯೇಂದ್ರ ಅವರು ಬೇಕು. 20 ವರ್ಷ ದಾವಣಗೆರೆ ಜಿಲ್ಲೆಯನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದರು. ಅಭಿವೃದ್ಧಿ, ಒಳ್ಳೆಯ ಚಿಂತನೆ ಮಾಡಲಿಲ್ಲ. ಹೀಗೆ ಮಾಡಿದ್ದರೆ ಇಷ್ಟೊಂದು ಸಮಸ್ಯೆ ಜಿಲ್ಲೆಯಲ್ಲಿ ಆಗುತ್ತಿರಲಿಲ್ಲ. ಸಾಮಾಜಿಕ ಸಮಾನತೆ ಬಗ್ಗೆ ಯೋಚನೆ ಮಾಡಲಿಲ್ಲ. ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ತೀಟೆ ಕೆಲಸ ಮಾಡಿದ್ದರಿಂದಲೇ, ಕಾರ್ಯಕರ್ತರನ್ನು ದೂಷಿಸಿದ್ದರಿಂದಲೇ ಈ ಗತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಪ್ರವೀಣ್ ಜಾಧವ್, ರಾಜು ವೀರಣ್ಣ, ಚಂದ್ರು, ಮಲ್ಲಿಕಾರ್ಜುನ್ ಪಟ್ಲೆ, ನಾಗರಾಜ್, ಸುಮಂತ್ ಮತ್ತಿತರರು ಹಾಜರಿದ್ದರು.