SUDDIKSHANA KANNADA NEWS/ DAVANAGERE/ DATE:06-02-2024
ದಾವಣಗೆರೆ: ವಿವಾಹಿತ ಮಹಿಳೆಯನ್ನು ಕೊಂದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ದಾವಣಗೆರೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,ತೀರ್ಪು ನೀಡಿದೆ.
ಹರಿಹರದ ಕುರುಬರ ಬೀದಿ ವಾಸಿ ಆದ ನಾಗರಾಜ್ ಎಂಬುವವರ ಪತ್ನಿ ರೇಖಾ (28) ಹತ್ಯೆಗೀಡಾಗಿದ್ದ ಮಹಿಳೆ. ಈ ಪ್ರಕರಣದ ಆರೋಪಿ ಚೇತನನೊಂದಿಗೆ ಪೋನ್ ನಲ್ಲಿ ಮಾತನಾಡುತಿದ್ದರಿಂದ ಅವಳ ಗಂಡನಾದ
ನಾಗರಾಜನು ಈ ಬಗ್ಗೆ ಎಚ್ಚರಿಕೆ ನೀಡಿದ್ದಲ್ಲದೇ ಮೃತೆ ರೇಖಾಳ ತಾಯಿ ಮತ್ತು ಅಣ್ಣ ಇಬ್ಬರು ಹರಿಹರಕ್ಕೆ ಬಂದು ರೇಖಾಳಿಗೆ ಬುದ್ದಿ ಮಾತು ಹೇಳಿದ್ದರು. ರೇಖಾಳು ಆರೋಪಿ ಚೇತನ್ ಸಹವಾಸವನ್ನು ಬಿಟ್ಟಿದ್ದರು. ಇದರಿಂದ ಕೋಪಗೊಂಡ ಚೇತನ್ 2020ರ ಡಿಸೆಂಬರ್ 29ರಂದು ಸಂಜೆ 6.45ರ ಸುಮಾರಿಗೆ ಹರಿಹರ ನಗರದ ಮಹೇಜನಹಳ್ಳಿ ಊರಮ್ಮನ ದೇವಸ್ಥಾನದ ಹತ್ತಿರ ಮಾರಾಟವಾಗದೇ ಉಳಿದಿದ್ದ ತರಕಾರಿಯನ್ನು ಪ್ರತಿದಿನದಂತೆ ರೇಖಾಳು ಗಂಟು ಕಟ್ಟಿ ಆಟೋಗೆ ಕಾಯುತ್ತಾ ತನ್ನ ಮಗ ಆಕಾಶನೊಂದಿಗೆ ನಿಂತುಕೊಂಡಿದ್ದರು.
ಆಗ ಅಲ್ಲಿಗೆ ಬಂದ ಆರೋಪಿ ಚೇತನ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ರೇಖಾಳ ಎದೆಗೆ, ಎಡಕೈಗೆ, ಬಲ ಕೆನ್ನೆಗೆ, ಬಲಮೊಣಕಾಲಿಗೆ ಚುಚ್ಚಿದ್ದು, ರೇಖಾಳನ್ನು ಅಲ್ಲಿದ್ದವರು ಹರಿಹರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೂ ರೇಖಾ ಮಾರ್ಗಮಧ್ಯೆ ಮೃತಪಟ್ಟಿದ್ದರಿಂದ ಈ ಸಂಬಂಧ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಗೊಂಡ ತನಿಖಾಧಿಕಾರಿ ಹರಿಹರ ಸಿಪಿಐ ಎಂ. ಶಿವಪ್ರಸಾದ್ ಆರೋಪಿ ಚೇತನ್ ಅಲಿಯಾಸ್ ಚೇತುನನ್ನು ಬಂಧಿಸಿ ಭಾಗಶಃ ತನಿಖೆ ನಡೆಸಿದ್ದರು. ನಂತರ ಹರಿಹರ ವೃತ್ತದ ಸಿಪಿಐ ಸತೀಶ ಕುಮಾರ್ ಅವರು ಪ್ರಕರಣದಲ್ಲಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ದಾವಣಗೆರೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದನ್ಯಾಯಾಧೀಶರಾದ ಜೆ.ವಿ ವಿಜಯಾನಂದ ಅವರು ಆರೋಪಿ ಚೇತನ್ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು. ಪ್ರಕರಣದಲ್ಲಿ ಪರ್ಯಾದಿಯವರ ಪರವಾಗಿ ಸರ್ಕಾರಿ ವಕೀಲರಾದ ಕೆ. ಎಸ್. ಸತೀಶ ನ್ಯಾಯ ಮಂಡನೆ ಮಾಡಿದ್ದರು.
ಪ್ರಕರಣದ ಭಾಗಶಃ ತನಿಖೆ ಮಾಡಿದ ಶಿವಪ್ರಸಾದ್ ಎಂ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತನಿಖಾಧಿಕಾರಿ ಯು. ಸತೀಶ್ ಕುಮಾರ್ ಹಾಗೂ ಪಿರ್ಯಾದಿದಾರರ ಪರವಾಗಿ ನ್ಯಾಯ ಮಂಡನೆ ಮಾಡಿದ ಸರ್ಕಾರಿ ವಕೀಲರಾದ ಕೆ. ಎಸ್. ಸತೀಶ್ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ ಮತ್ತು ಮಂಜುನಾಥ ಜಿ. ಅವರು ಶ್ಲಾಘಿಸಿದ್ದಾರೆ.