SUDDIKSHANA KANNADA NEWS/ DAVANAGERE/ DATE:19-03-2024
ದಾವಣಗೆರೆ: ದಾವಣಗೆರೆಯಲ್ಲಿ 3 ನೇ ವಿಶ್ವ ಕನ್ನಡ ಸಮ್ಮೇಳನ ಶೀಘ್ರವಾಗಿ ಆಯೋಜಿಸಬೇಕು. ರಾಜ್ಯ ಸರ್ಕಾರ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೂಡಲೇ ವಿಶೇಷಾಧಿಕಾರಿ ನೇಮಕ ಮಾಡಬೇಕು ಎಂಬುದೂ ಸೇರಿದಂತೆ ಒಟ್ಟು 8 ನಿರ್ಣಯಗಳನ್ನು ಹರಿಹರದ ಶ್ರೀ ಸಿದ್ದೇಶ್ವರ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಜಿಲ್ಲಾ 13 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಸಿ. ವಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕಸಾಪ ಸಮ್ಮೇಳನದಲ್ಲಿ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ವಿಶ್ವ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದಕ್ಕೆ ರಾಜ್ಯ ಸರಕಾರವನ್ನು ಅಭಿನಂದಿಸುತ್ತಾ, ಈ ಘೋಷಣೆಗೆ ಪೂರಕವಾಗಿ ಬಸವಣ್ಣನವರ ಕುರಿತಾದ ಚರ್ಚೆ ನಾಡಿನಾದ್ಯಂತ ಆಯೋಜಿಸಬೇಕು. ನಾಮಫಲಕಗಳು ಕನಿಷ್ಠ ಶೇಕಡಾ 60ರಷ್ಟು ಕನ್ನಡ ಭಾಷೆಯಲ್ಲಿಯೇ ಇರಬೇಕು ಎನ್ನುವ ಸರಕಾರದ ಆದೇಶ ಯಥಾವತ್ತಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ಇಚ್ಛಾಶಕ್ತಿಯನ್ನು ತೋರಬೇಕು ಎಂದು ಆಗ್ರಹಿಸಲು ನಿರ್ಣಯಿಸಲಾಗಿದೆ.
ಎಲ್ಲಾ ವರ್ಗದ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯ ಮಾಡುವುದರ ಜೊತೆಗೆ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಎಲ್ಲಾ ಹಂತದ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದಾವಣಗೆರೆ ಜಿಲ್ಲೆಯಲ್ಲಿ ಹಾಗೂ ವಿಶೇಷವಾಗಿ ಹರಿಹರ ತಾಲೂಕಿನಲ್ಲಿ ಭತ್ತ ಮತ್ತು ಗೋವಿನ ಜೋಳ ಉತ್ಪನ್ನಾಧಾರಿತ ಕೈಗಾರಿಕೆಗಳ ಸ್ಥಾಪನೆ, ಟೆಕ್ ಪಾರ್ಕ್ ಸ್ಥಾಪನೆ ಸೇರಿದಂತೆ ನೂತನ ಕೈಗಾರಿಕಗಳ ಸ್ಥಾಪನೆಗೆ ಆದ್ಯತೆ ನೀಡುವುದರೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಈ ಹಿಂದೆ ಕೆಲಸ ಕಳೆದುಕೊಂಡ ಕಾರ್ಮಿಕರ ಮತ್ತು ಅವರ ಮಕ್ಕಳ ಪುನಶ್ಚೇತನಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಲಾಗಿದೆ.
ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಗಳಿಗೂ ನೀರು ತಲುಪಿಸಬೇಕು ಹಾಗೂ ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಬೇಕು. ಶಿಥಿಲಾವಸ್ಥೆಯಲ್ಲಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನ ಅವಸಾನದ ಅಂಚಿನಲ್ಲಿರುವ ಬಾಪೂಜಿ ಹಾಲ್ ನ್ನು ನವೀಕರಣಗೊಳಿಸುವುದರ ಜೊತೆಗೆ ಮಧ್ಯ ಕರ್ನಾಟಕ ಭಾಗದಲ್ಲಿ ವಿಶ್ವ ದರ್ಜೆ ಸ್ಥಾನಮಾನದ ಕ್ರೀಡಾಂಗಣವನ್ನು ಸ್ಥಾಪಿಸಬೇಕು. ಹರಿಹರವೂ ಸೇರಿದಂತೆ ದಾವಣಗೆರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಅಗತ್ಯ ಸಹಕಾರ ಮತ್ತು ಅನುದಾನ ನೀಡಬೇಕು ಎಂದು ಆಗ್ರಹಿಸಲಾಗಿದೆ.