ಮುಂಬೈ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 79 ವರ್ಷಗಳು ಕಳೆದಿದ್ದರೂ, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗಿರಿಜನ ಹಳ್ಳಿಯೊಂದರ ಕಹಿ ಸತ್ಯ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಾಹಾಪುರ ತಾಲೂಕಿನ ಉಂಭರಾಯಿ ಗಿರಿಜನ ವಸತಿ ಪ್ರದೇಶದಲ್ಲಿ ಸೂಕ್ತ ಶ್ಮಶಾನ ಇಲ್ಲದೆ, ಮಳೆಯಲ್ಲಿ ಪ್ಲಾಸ್ಟಿಕ್ ಶೀಟ್ ಹಾಗೂ ತಾರ್ಪಾಲೀನ್ ಹಿಡಿದು ಮಹಿಳೆಯೊಬ್ಬರ ಅಂತ್ಯಸಂಸ್ಕಾರ ನಡೆಸಿದ ದೃಶ್ಯಾವಳಿಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸಮಿತಿ ಸದಸ್ಯೆಯಾಗಿದ್ದ ಜಯಾಬಾಯಿ ವಾಘ್ ಎಂಬುವರು ಇತ್ತೀಚೆಗೆ ನಿಧನರಾಗಿದ್ದರು. ಆದರೆ, ಸುಮಾರು 100 ಜನರ ಜನಸಂಖ್ಯೆ ಹೊಂದಿರುವ ಈ ಉಂಭರಾಯಿ ಗ್ರಾಮದಲ್ಲಿ ನಿಗದಿತ ಶ್ಮಶಾನವಿಲ್ಲದ ಕಾರಣ, ತೆರೆದ ಮೈದಾನದಲ್ಲೇ ಅಂತ್ಯಕ್ರಿಯೆ ನೆರವೇರಿಸಬೇಕಾಯಿತು. ಅಂತ್ಯಸಂಸ್ಕಾರದ ವೇಳೆ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ, ಚಿತೆ ಆರಿಹೋಗದಂತೆ ತಡೆಯಲು ಗ್ರಾಮಸ್ಥರು ಮಳೆಯಲ್ಲೇ ನಿಂತು ತಾರ್ಪಾಲೀನ್ ಹಾಗೂ ಪ್ಲಾಸ್ಟಿಕ್ ಶೀಟ್‌ಗಳನ್ನು ಮೇಲಕ್ಕೆ ಹಿಡಿದುಕೊಳ್ಳಬೇಕಾಯಿತು.
ಎರಡು ವರ್ಷಗಳ ಮನವಿಗೆ ಸಿಗದ ಸ್ಪಂದನೆ:
ಗ್ರಾಮದಲ್ಲಿ ಶ್ಮಶಾನ ನಿರ್ಮಾಣ ಮಾಡುವಂತೆ ಕಳೆದ ಎರಡು ವರ್ಷಗಳಿಂದ ಆಡಳಿತ ಮಂಡಳಿಗೆ ಮನವಿ ಮಾಡುತ್ತ ಬರಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಅಧಿಕಾರಿಯೊಬ್ಬರು ಜಾಗ ಪರಿಶೀಲಿಸಿ ಶ್ಮಶಾನ ನಿರ್ಮಿಸಿಕೊಡುವ ಭರವಸೆ ನೀಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
250ಕ್ಕೂ ಹೆಚ್ಚು ಹಳ್ಳಿಗಳ ಪರಿಸ್ಥಿತಿ ಇದೇ ರೀತಿ:
ಉಂಭರಾಯಿ ಮಾತ್ರವಲ್ಲದೆ ಶಾಹಾಪುರ ತಾಲೂಕಿನಾದ್ಯಂತ 250ಕ್ಕೂ ಹೆಚ್ಚು ಗಿರಿಜನ ಹಳ್ಳಿಗಳು ಮತ್ತು ವಸತಿ ಪ್ರದೇಶಗಳಲ್ಲಿ ಸೂಕ್ತ ಶ್ಮಶಾನಗಳ ಕೊರತೆಯಿದೆ ಎಂದು ಸಾಮಾಜಿಕ ಸಂಸ್ಥೆಗಳು ತಿಳಿಸಿವೆ. ಕೆಲವು ಕಡೆ ಜಾಗದ ಕೊರತೆಯಿದ್ದರೆ, ಇನ್ನು ಕೆಲವು ಕಡೆ ಅನುದಾನ ಹಾಗೂ ಮೂಲಸೌಕರ್ಯಗಳ ಅಭಾವವಿದೆ. ಮಳೆಗಾಲದಲ್ಲಿ ಸೂಕ್ತ ರಸ್ತೆ ಸಂಪರ್ಕವಿಲ್ಲದೆ, ನದಿ-ತೊರೆಗಳನ್ನು ದಾಟಿ ಮೃತದೇಹಗಳನ್ನು ತೆಗೆದುಕೊಂಡು ಹೋಗಬೇಕಾದ ದುಸ್ಥಿತಿ ಇಲ್ಲಿದೆ. ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳ ನಡುವೆಯೂ, ಕನಿಷ್ಠ ಶವಸಂಸ್ಕಾರಕ್ಕಾದರೂ ಜಾಗವಿಲ್ಲದಿರುವುದು ಆಡಳಿತದ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ.





Leave a comment