ನವದೆಹಲಿ: ರೋಹಿಣಿ ಪೋಕ್ಸೊ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ರಜನಿ ರಂಗಾ ಅವರು, 10 ವರ್ಷದ ಬಾಲಕಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸುಮಿತ್ ಶ್ಯಾಕ್ಯ ಎಂಬ ಅಪರಾಧಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.
ವಿಚಾರಣೆ ವೇಳೆ ಬಾಲಕಿಯು “ನಾನು ‘ಅಂಕಲ್’ ಎಂದು ಕರೆಯುತ್ತಿದ್ದ ಈ ವ್ಯಕ್ತಿ ಮುಪ್ಪಾಗುವವರೆಗೂ ಜೈಲಿನಲ್ಲೇ ಇರಬೇಕು” ಎಂದು ವಿನಂತಿಸಿದ್ದಳು. ಈ ಮಾತಿಗೆ ಸ್ಪಂದಿಸಿದ ನ್ಯಾಯಾಧೀಶರು, ತಮ್ಮ ತೀರ್ಪಿನ ಕೊನೆಯಲ್ಲಿ ಬಾಲಕಿಗೆ ಕಾಗದದ ಮೂಲಕ ಸಾಂತ್ವನ ಮತ್ತು ಧೈರ್ಯ ತುಂಬುವ ವಿಶೇಷ ಸಂದೇಶ ಬರೆದಿದ್ದರು.
ನ್ಯಾಯಾಧೀಶರ ಈ ಭಾವನಾತ್ಮಕ ಪತ್ರವನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಹಾಗೂ ನ್ಯಾಯಮೂರ್ತಿ ದಿನೇಶ್ ಭಟ್ ಅವರ ಪೀಠವು “ಧೈರ್ಯದ ಸಂದೇಶ” ಎಂದು ಶ್ಲಾಘಿಸಿದೆ. ಈ ಸಂದೇಶದ ಪ್ರತಿಯನ್ನು ಮುದ್ರಿಸಿ, ನ್ಯಾಯಾಲಯ ನಿಗದಿಪಡಿಸಿರುವ ₹10.50 ಲಕ್ಷ ಪರಿಹಾರದೊಂದಿಗೆ ಎರಡು ವಾರಗಳ ಒಳಗೆ ಬಾಲಕಿಗೆ ಅಥವಾ ಆಕೆಯ ಕುಟುಂಬಕ್ಕೆ ತಲುಪಿಸುವಂತೆ ವಾಯುವ್ಯ ದೆಹಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಜೊತೆಗೆ, ಅಪರಾಧಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಾಧೀಶರ ಭಾವನಾತ್ಮಕ ಪತ್ರ
“ಪ್ರಿಯ ಮಗಳೇ (ಬೇಟಾ),
ಈ ನ್ಯಾಯಾಲಯ ನಿನ್ನ ಮಾತನ್ನು ಕೇಳಿದೆ. ‘ಅಂಕಲ್ ವೃದ್ಧರಾಗುವವರೆಗೂ ಜೈಲಿನಲ್ಲೇ ಇರಲಿ’ ಎಂದು ನೀನು ಹೇಳಿದಾಗ, ಈ ಕೋರ್ಟ್ ಅದನ್ನು ಆಲಿಸಿತು ಮತ್ತು ನಿನ್ನ ಮನವಿಗೆ ಉತ್ತರ ನೀಡಿದೆ.
ನೀನು ‘ಅಂಕಲ್’ ಎಂದು ಕರೆದ ವ್ಯಕ್ತಿ ಇನ್ನು ಮುಂದೆಂದೂ ಹೊರಗೆ ಸ್ವತಂತ್ರವಾಗಿ ಓಡಾಡಲು ಸಾಧ್ಯವಿಲ್ಲ. ಅವನು ತನ್ನ ಜೀವಿತಾವಧಿಯ ಕೊನೆಯವರೆಗೂ ಪಂಜರದಲ್ಲೇ ಇರುತ್ತಾನೆ. ಅದೇ ಪಂಜರದಲ್ಲಿ ವೃದ್ಧನಾಗುತ್ತಾನೆ ಮತ್ತು ಅಲ್ಲೇ ಸಾಯುತ್ತಾನೆ. ಅವನು ಇನ್ಮುಂದೆ ನಿನ್ನನ್ನಾಗಲಿ, ನಿನ್ನ ತಂಗಿಯನ್ನಾಗಲಿ ಅಥವಾ ಬೇರೆ ಯಾವುದೇ ಮಗುವನ್ನಾಗಲಿ ಎಂದಿಗೂ ಉಪದ್ರವಿಸಲು ಸಾಧ್ಯವಿಲ್ಲ.
ಈ ನ್ಯಾಯಾಲಯ ನೋಡಿರುವ ಅತ್ಯಂತ ಧೈರ್ಯಶಾಲಿ ಹೆಣ್ಣುಮಗು ನೀನು. ನೀನು ನ್ಯಾಯಾಲಯಕ್ಕೆ ಬಂದೆ, ನಿನಗೆ ನೋವುಂಟು ಮಾಡಿದ ವ್ಯಕ್ತಿಯನ್ನು ಬೆಟ್ಟು ಮಾಡಿ ತೋರಿಸಿದೆ ಮತ್ತು ಸತ್ಯವನ್ನು ಹೇಳಿದೆ.
ನೀನು ‘ಅಂಕಲ್’ ಎಂದು ಕರೆದ ವ್ಯಕ್ತಿ ನಿನಗೆ ತುಂಬಾ ಕೆಟ್ಟದ್ದನ್ನು ಮಾಡಿದ. ಆದರೆ ನೀನು ಸುಮ್ಮನೆ ಕೂರಲಿಲ್ಲ; ನಿನ್ನ ತಾಯಿಗೆ ವಿಷಯ ತಿಳಿಸಿದೆ. ನೀನು ಮಾತನಾಡಲು ತೋರಿದ ಧೈರ್ಯದಿಂದಾಗಿ, ಅವನು ಮತ್ತೊಬ್ಬ ಮಗುವಿಗೆ ಹಾನಿ ಮಾಡಲು ಸಾಧ್ಯವಾಗುವುದಿಲ್ಲ.
ಈ ನ್ಯಾಯಾಲಯಕ್ಕೆ ನಿನ್ನ ಬಾಲ್ಯವನ್ನು ಮರಳಿ ನೀಡಲು ಸಾಧ್ಯವಿಲ್ಲ. ಆದರೆ ನಿನ್ನ ಮಾತುಗಳನ್ನು ಆಲಿಸಲಾಗಿದೆ ಮತ್ತು ನಿನ್ನ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಕೋರ್ಟ್ ಮಾತು ನೀಡುತ್ತದೆ. ನಿನಗೆ ನೋವುಂಟು ಮಾಡಿದ ವ್ಯಕ್ತಿ ಇನ್ಮುಂದೆ ಸ್ವತಂತ್ರ ಮನುಷ್ಯನಾಗಿ ಸೂರ್ಯನನ್ನು ನೋಡಲು ಸಾಧ್ಯವಿಲ್ಲ.
ಈಗ, ಮಗಳೇ, ನಿನ್ನ ಜೀವನವನ್ನು ಜೀವಿಸು. ಶಾಲೆಗೆ ಹೋಗು. ಸ್ನೇಹಿತರನ್ನು ಮಾಡಿಕೋ. ನಗು, ಆಟವಾಡು, ಕನಸು ಕಾಣು. ಈ ನ್ಯಾಯಾಲಯವು ನಿನ್ನ ಧೈರ್ಯವನ್ನು ಎಂದೆಂದಿಗೂ ನೆನಪಿನಲ್ಲಿಡುತ್ತದೆ.”





Leave a comment