Home ಕ್ರೈಂ ನ್ಯೂಸ್ ಗಣೇಶ ವಿಸರ್ಜನೆ ವೇಳೆ ತೆಲಂಗಾಣದಲ್ಲಿ ಆರು, ಒಡಿಶಾದಲ್ಲಿ ಮೂವರು ಬಾಲಕರು ಜಲಸಮಾಧಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗಣೇಶ ವಿಸರ್ಜನೆ ವೇಳೆ ತೆಲಂಗಾಣದಲ್ಲಿ ಆರು, ಒಡಿಶಾದಲ್ಲಿ ಮೂವರು ಬಾಲಕರು ಜಲಸಮಾಧಿ!

Share
ಗಣೇಶ
Share

ಸಂಗಾರೆಡ್ಡಿ / ಗಂಜಾಂ: ದೇಶಾದ್ಯಂತ ಗಣೇಶೋತ್ಸವದ ಸಂಭ್ರಮ ಮುಗಿಲು ಮುಟ್ಟಿರುವ ಬೆನ್ನಲ್ಲೇ ತೆಲಂಗಾಣ ಮತ್ತು ಒಡಿಶಾದಿಂದ ಅತ್ಯಂತ ವಿಷಾದನೀಯ ಘಟನೆಗಳು ವರದಿಯಾಗಿವೆ. ಗಣಪತಿ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ ನೀರಿನ ಆಳ ತಿಳಿಯದೆ ಕೆರೆ ಮತ್ತು ನದಿಗಿಳಿದ ಒಟ್ಟು 9 ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ತೆಲಂಗಾಣದ ಸಂಗಾರೆಡ್ಡಿಯಲ್ಲಿ ೬ ಮಕ್ಕಳ ದುರಂತ ಸಾವು:

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಾನ್‌ಚೆರು ಮಂಡಲದ ಪೆದ್ದಕಂಜೆರ್ಲ ಗ್ರಾಮದಲ್ಲಿ ಬುಧವಾರ ಸಂಜೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ದೊಡ್ಡ ದುರಂತ ಸಂಭವಿಸಿದೆ. ಸ್ಥಳೀಯ ಶಿರೀಷ ಚಾರಿಟೇಬಲ್ ಟ್ರಸ್ಟ್ ಆಶ್ರಮದ ವಿದ್ಯಾರ್ಥಿಗಳು ಗಣೇಶ ಮೂರ್ತಿಯನ್ನು ವಿಸರ್ಜಿಸಲು ಗ್ರಾಮದ ನೆರೇಡು ಕೆರೆಗೆ ತೆರಳಿದ್ದರು.

ಮೂರ್ತಿ ವಿಸರ್ಜಿಸುವ ವೇಳೆ ಆಜಾಗರೂಕತೆಯಿಂದ ಕೆರೆಯ ಆಳವಾದ ಭಾಗಕ್ಕೆ ತೆರಳಿದ ಆರು ಬಾಲಕರು ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳೀಯರು ಹಾಗೂ ಇತರ ವಿದ್ಯಾರ್ಥಿಗಳು ರಕ್ಷಣೆಗೆ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ನಂತರ ಪೋಲಿಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದು ಪಟಾನ್‌ಚೆರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರನ್ನು ನರಸಿಂಹ ರಾಜು (18), ಸುಮಂತ್ (19), ಗಣೇಶ್ (20), ಉದಯ್ ಕುಮಾರ್ (21), ಶ್ಯಾಮ್ ಕುಮಾರ್ (18) ಹಾಗೂ ಸಿದ್ಧಾರ್ಥ್ (16) ಎಂದು ಗುರುತಿಸಲಾಗಿದೆ.

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಮೂವರು ಬಾಲಕರ ಜಲಸಮಾಧಿ:

ಇತ್ತ ನೆರೆ ರಾಜ್ಯವಾದ ಒಡಿಶಾದ ಗಂಜಾಂ ಜಿಲ್ಲೆಯಲ್ಲೂ ಇಂತಹುದೇ ಎರಡು ಪ್ರತ್ಯೇಕ ದುರಂತಗಳು ಸಂಭವಿಸಿವೆ.

ದಿಗಪಹಂಡಿ ಘಟನೆ: ದಿಗಪಹಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ಕೆರೆಯಲ್ಲಿ ೮ನೇ ತರಗತಿ ವಿದ್ಯಾರ್ಥಿ ಸಿತಾಂಶು ಜೇನಾ ಎಂಬಾತ ವಿಸರ್ಜನೆ ವೇಳೆ ಮುಳುಗಿ ಮೃತಪಟ್ಟಿದ್ದಾನೆ.

ಹಿಂಜಿಲಿಕಟ್ ಘಟನೆ:

ಹಿಂಜಿಲಿಕಟ್ ಪುರಸಭೆ ವ್ಯಾಪ್ತಿಯ ೧೪ ವರ್ಷದ ಬಾಲಕರಾದ ಆದರ್ಶ್ ಸಾಹು ಮತ್ತು ಪ್ರೀತಮ್ ಸಮೇಲಿ ಎಂಬಿಬ್ಬರು ಘೋಡಾಹಡ್ ನದಿಯಲ್ಲಿ ಗಣೇಶ ವಿಸರ್ಜನೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಎರಡೂ ರಾಜ್ಯಗಳಲ್ಲಿ ಸಂಬಂಧಪಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆಗಳು ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ತೀವ್ರ ಶೋಕವನ್ನು ಉಂಟುಮಾಡಿವೆ.

Share

Leave a comment

Leave a Reply

Your email address will not be published. Required fields are marked *

Related Articles